ಹಾಸನ:ಪ್ರತಿ ದಿನ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶನಿವಾರ ಒಂದೇ ದಿನ 34 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ಎರಡು ಸಾವುಗಳು ಸಂಭವಿಸಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ್ ತಿಳಿಸಿದರು.
ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅಧಿಕಾರಿಗಳು, ಜಿಲ್ಲೆಯಲ್ಲಿ ಇಂದು 34 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 655ಕ್ಕೆ ಏರಿಕೆಯಾಗಿದೆ. 421 ಜನರು ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. 217 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಇಬ್ಬರು ಮೃತಪಟ್ಟಿದ್ದು, ಇಲ್ಲಿಯವರೆಗೂ 17 ಜನರು ಸಾವನಪ್ಪಿದ್ದಾರೆ ಎಂದರು.
30 ವರ್ಷದ ಆಲೂರಿನ ನಿವಾಸಿ ಜೂನ್ 25 ರಂದು ಹಾಸನ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆೆ. 47 ವರ್ಷದ ಇನ್ನೋರ್ವ ವ್ಯಕ್ತಿ ಕಿಡ್ನಿ ತೊಂದರೆ ಇದ್ದು, ಜುಲೈ 9 ರಂದು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಿದ್ದರು. ಇವರಿಗೆ ಕೊರೊನಾ ಪಾಸಿಟಿವ್ ಇದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿಸಿದರು.