ಆಲೂರು(ಹಾಸನ):ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದು, ಸಕಲೇಶಪುರ ಸಾರಿಗೆ ಇಲಾಖೆಯ ವಾಹನ ತನಿಖಾಧಿಕಾರಿ ಸಿ.ಪಿ.ಅನಿಲ್ ಕುಮಾರ್ ತಿಳಿಸಿದರು.
ಪಟ್ಟಣದ ವಿಶ್ವೇಶ್ವರಯ್ಯ ಐಟಿಐ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಬಸ್ ನಿಲ್ದಾಣದ ಮುಂಭಾಗದ ಆಟೋ ನಿಲ್ದಾಣ ಮತ್ತು ಸರ್ಕಾರಿ ಐಟಿಐ ಕಾಲೇಜಿನಲ್ಲಿ, 31ನೇ ರಾಷ್ಟ್ರೀಯ ಸುರಕ್ಷಾ ಸಪ್ತಾಹ ಮತ್ತು ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ರು.
ಅಜಾಗರೂಕ ಚಾಲನೆಯು ಅಪಾಯದೊಂದಿಗೆ ಜೀವಹಾನಿಗೂ ಕಾರಣವಾಗುತ್ತದೆ. ಯಾವುದೇ ರೀತಿಯ ವಾಹನ ಚಾಲನೆ ಮಾಡುವಾಗ ಸುರಕ್ಷಿತ ಚಾಲನೆ, ರಸ್ತೆ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಎಂದರು. ಈ ಕುರಿತು ಪ್ರತಿಯೊಬ್ಬರು ಜಾಗೃತರಾಗಿ, ಇತರರಿಗೂ ಜಾಗೃತಿ ಮೂಡಿಸಬೇಕು. ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸದೇ, ಅಪಘಾತವು ಸಂಭವಿಸಿ ನಮ್ಮ ಅಮೂಲ್ಯವಾದ ಪ್ರಾಣಕ್ಕೆ ಸಂಚಾಕಾರ ತಂದುಕೊಳ್ಳುವಿರಿ. ಅಲ್ಲದೇ ನಿಮ್ಮಿಂದ ಇತರರು ಶಾಶ್ವತವಾಗಿ ಅಂಗವಿಕಲರಾಗುವುದು ಬೇಡ ಎಂದು ಸಲಹೆ ನೀಡಿದ್ರು.
ಆಲೂರಿನಲ್ಲಿ 31ನೇ ರಾಷ್ಟ್ರೀಯ ಸುರಕ್ಷಾ ಸಪ್ತಾಹ ಮತ್ತು ರಸ್ತೆ ಸುರಕ್ಷತಾ ಅಭಿಯಾನ ಇನ್ನು ಸರ್ಕಲ್ ಇನ್ಸ್ಪೆಕ್ಟರ್ ರೇವಣ್ಣ ಮಾತನಾಡಿ, ಮೊಬೈಲ್ನಲ್ಲಿ ಮಾತನಾಡಿಕೊಂಡು ವಾಹನ ಚಾಲನೆ ಮಾಡಿದರೆ ಅಪಘಾತ ನಡೆಯುತ್ತದೆ. ಕುಡಿದು ವಾಹನ ಚಾಲನೆ ಮಾಡುವುದು, ಓವರ್ ಲೋಡ್ ಮಾಡಿಕೊಂಡು ವಾಹನವನ್ನು ಸುಸ್ಥಿತಿಯಲ್ಲಿಟ್ಟು ಕೊಳ್ಳದೇ ವಾಹನವನ್ನು ಚಾಲನೆ ಮಾಡುವುದರಿಂದಲೂ ಅಪಘಾತಗಳು ಸಂಭವಿಸುತ್ತಿವೆ ಎಂದರು. ಹೀಗಾಗಿ ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ವಾಹನ ಚಲಾಯಿಸಬೇಕು ಎಂದು ಹೇಳಿದರು.