ಹಾಸನ:ಕಾಂಗ್ರೆಸ್ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕ ಅನುದಾನ 74,325 ಕೋಟಿ. ಪ್ರಧಾನಿ ಮೋದಿ ಅವಧಿಯಲ್ಲಿ 3,18,954 ಕೋಟಿ ಅನುದಾನ ಬಂದಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಜೆ. ಪುಟ್ಟಸ್ವಾಮಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಲ್ಕೂವರೆ ಪಟ್ಟು ಹೆಚ್ಚಿನ ಅನುದಾನವನ್ನ ರಾಜ್ಯಕ್ಕೆ ನೀಡಲಾಗಿದೆ. ಮೋದಿ ವಿರುದ್ಧವಾಗಿ ಒಂದು ಮಹಾಘಟಬಂಧನ ಮಾಡಿದ್ದಾರೆ. ಇದರಲ್ಲಿ ಸ್ಥಳೀಯ ನಾಯಕರು ಮತ್ತು ಮಾಜಿ ಪ್ರಧಾನಿ ದೇವೇಗೌಡರು ಹೆಚ್ಚಾಗಿ ಭಾಗವಹಿಸಿದ್ದಾರೆ. ಇವರ ಅಜೆಂಡಾ ಕೇವಲ ಅವರ ಕುಟುಂಬ. ಕುಟುಂಬವೇ ತಮ್ಮ ದೇಶ ಎನ್ನುತ್ತಾರೆ. ಆದರೆದೇಶವೇ ತನ್ನ ಕುಟುಂಬ ಅನ್ನೋದುಮೋದಿ ಅಜೆಂಡಾ. ಮಹಾಘಟಬಂಧನದ ನಾಯಕರಿಗೆ ದೇಶದ ಒಗ್ಗಟ್ಟಾಗಲಿ, ಅಭಿವೃದ್ಧಿಯಾಗಲಿ ಮುಖ್ಯವಲ್ಲ. ಅವರ ಸಂಸಾರದ ಅಭಿವೃದ್ಧಿ ಮುಖ್ಯವಾಗಿದೆ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿದ್ದಾರೆ. ಮಾನಸಿಕವಾಗಿ ಕಾರ್ಯಕರ್ತರಾಗಲಿ, ನಾಯಕರಾಗಲಿ ಒಂದಾಗಿಲ್ಲ. ರಾಜ್ಯದ ಮೈತ್ರಿ ಅತಂತ್ರ ಸ್ಥಿತಿಯಲ್ಲಿದೆ. ಹಾಸನ, ಮಂಡ್ಯ, ತುಮಕೂರಿನಲ್ಲಿ ಕುಟುಂಬ ವಿಸ್ತರಣೆಗೆ ಹೊರಟಿದ್ದಾರೆ. ದೇವೇಗೌಡರ ಕುಟುಂಬದ ಮೂವರು ಅಭ್ಯರ್ಥಿಗಳೂ ಕೂಡ ಸೋಲುತ್ತಾರೆ ಎಂದು ಪುಟ್ಟಸ್ವಾಮಿ ಭವಿಷ್ಯ ನುಡಿದರು.
ದೇವೇಗೌಡರ ಕುಟುಂಬಸ್ಥರು ಸರ್ಕಾರಿ ಗೋಮಾಳ ಸೇರಿದಂತೆ ಸರ್ಕಾರಿ ಭೂಮಿ ಯಾರಿಗೂ ಸಿಗದಂತೆ ಮಾಡುತ್ತಾರೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇರುವುದು ನಿಜ. ಆದರೆ ಬಿಜೆಪಿಯಲ್ಲಿ ಇದು ಕೇವಲ ಅಪ್ಪ, ಮಕ್ಕಳಿಗೆ ಸೀಮಿತವಾಗಿದೆ. ಯಡಿಯೂರಪ್ಪ ತಮ್ಮ ಮತ್ತೊಬ್ಬ ಮಗನಿಗೆ ವಿಧಾನಸಭೆ ಟಿಕೆಟ್ ಕೊಡಿಸಲು ಎಷ್ಟು ಪ್ರಯತ್ನ ಮಾಡಿದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯೇಂದ್ರಗೆ ಟಿಕೆಟ್ ನೀಡಲಿಲ್ಲ. ಜೆಡಿಎಸ್ನಲ್ಲಿ ಅಪ್ಪ ಮಕ್ಕಳು, ಮೊಮ್ಮಕ್ಕಳು ಸೊಸೆಯರು ಕೂಡ ರಾಜಕೀಯದಲ್ಲಿದ್ದಾರೆ ಎಂದು ದೇವೇಗೌಡರ ವಿರುದ್ಧ ಪುಟ್ಟಸ್ವಾಮಿ ವಾಗ್ದಾಳಿ ನಡೆಸಿದರು.