ಅರಕಲಗೂಡು: ಆಧುನಿಕತೆಗೆ ಒಗ್ಗಿಕೊಳ್ಳುವ ಮೂಲಕ ಮಕ್ಕಳು ದೇಶೀಯ ಕಲೆಗಳತ್ತಲೂ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಮಾಜಿ ಸಚಿವ ಎ. ಮಂಜು ಸಲಹೆ ನೀಡಿದರು.
ಪಟ್ಟಣದ ಶಿವದೇವ ಕಲ್ಯಾಣ ಮಂಟಪದಲ್ಲಿ ಎ. ಮಂಜು ಅಭಿಮಾನಿ ಬಳಗದಿಂದ ಭಾನುವಾರ ರಾತ್ರಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೊನಾ ಲಾಕ್ಡೌನ್ ಸಮಯದಲ್ಲಿ ಶಾಲೆಗಳು ಮುಚ್ಚಿದ್ದರಿಂದ ಮನೆಯಲ್ಲಿಯೇ ಉಳಿದಿದ್ದ ಮಕ್ಕಳ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದ ಮುಖೇನ ಒದಗಿಸಿದ್ದ ವಿಭಿನ್ನ ಪ್ರತಿಭಾ ವೇದಿಕೆಗೆ ನಿರೀಕ್ಷೆಗೂ ಮೀರಿ ಅಭೂತಪೂರ್ವ ಬೆಂಬಲ ಸಿಕ್ಕಿದ್ದು ಶ್ಲಾಘನೀಯ ಸಂಗತಿ. ಪೋಷಕರು ಮಕ್ಕಳ ಪ್ರತಿಭೆ ಗುರುತಿಸುವ ಕಾರ್ಯವನ್ನು ಹೊಣೆಗಾರಿಕೆಯಾಗಿ ವಹಿಸಿಕೊಳ್ಳಬೇಕು. ಮುಖ್ಯವಾಗಿ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳ ಪಾಲಕರು ಹಾಜರಿರುವುದು ಒಳಿತು ಎಂದರು.