ಸಕಲೇಶಪುರ(ಹಾಸನ):ಸಕಲೇಶಪುರ ತಾಲೂಕಿನ ಹಾಲೆಬೇಲೂರು ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಕೂಲಿ ಕಾರ್ಮಿಕನಿಗೆ ಬ್ರಿಟಿಷರ ಕಾಲದ 28 ಬೆಳ್ಳಿ ನಾಣ್ಯಗಳು ಸಿಕ್ಕಿವೆ. ಆದರೆ, ಅವುಗಳನ್ನು ಸರ್ಕಾರಕ್ಕೆ ಒಪ್ಪಿಸಲು ಮುಂದಾಗದೇ ತನ್ನ ಬಳಿಯೇ ಇಟ್ಟುಕೊಂಡಿದ್ದ ಹಿನ್ನೆಲೆ ಆರೋಪಿಯನ್ನು ಬಂಧಿಸುವಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಹರೀಶ್ ಬಂಧಿತ ಆರೋಪಿ.
ಏನಿದು ಪ್ರಕರಣ?:
ಕಳೆದ 15 ದಿನಗಳ ಹಿಂದೆ ಹಾಲೇಬೇಲೂರು ಗ್ರಾಮದ ಶಾಮ್ ಸುಂದರ್ ಎಂಬುವರ ತೋಟದಲ್ಲಿ ಹರೀಶ್ ಹಾಗೂ ಇತರರು ಕೂಲಿ ಕೆಲಸಕ್ಕೆಂದು ಬಂದಿದ್ದರು. ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಬ್ರಿಟಿಷರ ಕಾಲದ ಕೆಲವು ನಾಣ್ಯಗಳು ದೊರಕಿವೆ. ಈ ವಿಚಾರವನ್ನು ತೋಟದ ಮಾಲೀಕರಾಗಲಿ ಅಥವಾ ಪೊಲೀಸರಿಗೆ ತಿಳಿಸದೇ ಹರೀಶ್ ಅವುಗಳನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ.
ಬಳಿಕ ಈ ನಾಣ್ಯಗಳನ್ನು ಹರೀಶ್ ಕೆಲವು ಕಡೆ ಚಲಾವಣೆ ಮಾಡಲು ಮುಂದಾಗಿದ್ದಾನೆ. ಈ ವಿಚಾರ ಗ್ರಾಮದಲ್ಲೆಲ್ಲ ಹರಿದಾಡಿದ ಬೆನ್ನಲ್ಲಿಯೇ ಮಾಲೀಕ ಶ್ಯಾಮ್, ಹರೀಶ್ನನ್ನ ಕರೆದು ವಿಚಾರಣೆ ಮಾಡಿದಾಗ ನನ್ನ ಬಳಿ 9 ನಾಣ್ಯಗಳು ಸಿಕ್ಕಿವೆ ಎಂದು ಮಾಲೀಕರಿಗೆ ಹಿಂದಿರುಗಿಸಿದ್ದಾನೆ.
ತಕ್ಷಣ ಮಾಲೀಕ ಈ ವಿಚಾರವನ್ನು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಬಳಿಕ ಕಾರ್ಮಿಕನ ವಿಚಾರಣೆಗೊಳಪಡಿಸಿದಾಗ ಆರೋಪಿ ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಇನ್ನುಳಿದ 19 ಬೆಳ್ಳಿ ನಾಣ್ಯಗಳನ್ನು ಹಿಂದಿರುಗಿಸಿದ್ದಾನೆ ಎಂದು ತಿಳಿದು ಬಂದಿದೆ.
ಸಿಕ್ಕಿರುವ 28 ಬೆಳ್ಳಿ ನಾಣ್ಯಗಳು ಮಾರುಕಟ್ಟೆಯಲ್ಲಿ ಕೋಟ್ಯಂತರ ಮೌಲ್ಯದ್ದಾಗಿವೆ. ಸದ್ಯ ವಶಪಡಿಸಿಕೊಂಡ ನಾಣ್ಯಗಳನ್ನು ಪ್ರಾಚೀನ ಹಾಗೂ ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ:ವಿಷಾಹಾರ ಸೇವಿಸಿ ಇಂದಿರಾಗಾಂಧಿ ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲು