ಹಾಸನ: ಜಿಲ್ಲೆಯಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಜೆಡಿಎಸ್‌ನ 23 ಸದಸ್ಯರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ವಿಶೇಷ ಸಭೆಗೆ ಗೈರು ಹಾಜರಾಗಿದ್ದು, ಅಭಿವೃದ್ಧಿ ವಿಚಾರದಲ್ಲಿ ಅಸಹಕಾರ ತೋರುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ಶ್ವೇತಾ ದೇವರಾಜ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ನಿಯಂತ್ರಣ ಉದ್ದೇಶದಿಂದ 15ನೇ ಹಣಕಾಸು ಯೋಜನೆಯಡಿ ಸರ್ಕಾರ 6.20 ಕೋಟಿ ರೂಪಾಯಿ ಅನುದಾನ ನೀಡಿದೆ. ಅದರಲ್ಲಿ ಶೇ 50ರಷ್ಟು ಹಣವನ್ನು ಕೊರೊನಾ ಕಾರ್ಯಕ್ಕೆ ಬಳಸಬಹುದಾಗಿದೆ. ಆದ್ದರಿಂದ ಮಂಗಳವಾರ ವಿಶೇಷ ಸಭೆ ಕರೆಯಲಾಗಿತ್ತು. ಜೆಡಿಎಸ್‌ನ ಸದಸ್ಯರು ಜಿಲ್ಲಾ ಪಂಚಾಯಿತಿಗೆ ಬಂದರು ಸಭೆಗೆ ಭಾಗವಹಿಸಿರಲಿಲ್ಲ. ಮೇ 30ರ ಒಳಗೆ ಸಾಮಾನ್ಯ ಸಭೆ ಅನುಮೋದನೆ ಪಡೆಯದಿದ್ದರೆ ಅಷ್ಟೂ ಅನುದಾನ ವಾಪಸ್ ಹೋಗಲಿದೆ ಎಂದು ತಿಳಿಸಿದರು.
ಇನ್ನು ಕಳೆದ ನಾಲ್ಕು ವರ್ಷಗಳಿಂದ ಜೆಡಿಎಸ್ ದ್ವೇಷ ರಾಜಕಾರಣ ಮಾಡಿಕೊಂಡು ಬಂದಿದೆ. ಮಂಗಳವಾರದ ವಿಶೇಷ ಸಭೆಗೆ ಬಿಜೆಪಿಯ ಒಬ್ಬ ಹಾಗೂ ಕಾಂಗ್ರೆಸ್‌ನ 16 ಸದಸ್ಯರು ಹಾಜರಿದ್ದರು. ಜೆಡಿಎಸ್‌ನ 23 ಸದಸ್ಯರು ಜಿಲ್ಲಾ ಪಂಚಾಯಿತಿಗೆ ಬಂದರೂ ಮೀಟಿಂಗ್ ಹಾಲ್‌ಗೆ ಬರಲಿಲ್ಲ. ಕಳೆದ ಮೂರು ಸಭೆಗೆ ಇದೇ ರೀತಿ ಗೈರಾಗಿದ್ದಾರೆ ಎಂದು ಆರೋಪಿಸಿದರು.
ಮೇ 26 ರಂದು ವಿಶೇಷ ಸಭೆ ನಡೆಸುತ್ತೇನೆಂದು 12 ದಿನಗಳ ಹಿಂದೆಯೇ ಎಲ್ಲರಿಗೂ ಸೂಚನೆ ನೀಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಅವರು ಹೀಗೆಲ್ಲ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ವರಿಷ್ಠರ ಮಾತಿಗೆ ಮನ್ನಣೆ ನೀಡಿ ಬೆಂಬಲಿಸಿದ್ದೇವೆ. ಆದರೆ ಈಗ ನಮಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳಿದರು.
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನಕ್ಕೆ ಅನುಮೋದನೆ ನೀಡುವ ಉದ್ದೇಶದಿಂದ ಮೇ 29 ರಂದು ಮತ್ತೊಮ್ಮೆ ವಿಶೇಷ ಸಭೆ ಕರೆಯಲಾಗಿದೆ. ಈ ಸಭೆಗೆ ಜೆಡಿಎಸ್‌ನ ಎಲ್ಲಾ ಸದಸ್ಯರು ಹಾಜರಾಗಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿ ಎಂದು ಕೋರುತ್ತೇನೆ ಎಂದರು.