ಹಾಸನ:ಜಿಲ್ಲೆಯ ಸಕಲೇಶಪುರ ತಾಲೂಕಿನ ಖಾಸಗಿ ಎಸ್ಟೇಟ್ ಒಂದರಲ್ಲಿ ಅಕ್ರಮವಾಗಿ ಬಂಧಿಯಾಗಿದ್ದ ಜಿಂಕೆಗಳನ್ನು ಅರಣ್ಯ ಅಧಿಕಾರಿಗಳು ಬಂಧಮುಕ್ತ ಮಾಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ನಡುವಿನ ಹೊಸ್ಸೂರು ಎಸ್ಟೇಟ್ನಲ್ಲಿದ್ದ ಸುಮಾರು 22 ಜಿಂಕೆಗಳನ್ನು ಕಳೆದ 2 ದಿನದಿಂದ ತಲಾ ಮೂರು ಜಿಂಕೆಗಳಂತೆ ಸ್ಥಳಾಂತರಿಸುವ ಕಾರ್ಯವಾಗುತ್ತಿದೆ. ಆಹಾರ ಅರಸಿ ಬಂದ ಜಿಂಕೆ ಮರಿಗಳನ್ನು ಸಾಕುವ ಉದ್ದೇಶದಿಂದ ಎಸ್ಟೇಟ್ ಮಾಲೀಕ ಅವುಗಳು ಹೊರ ಹೋಗದಂತೆ ಬೇಲಿ ನಿರ್ಮಿಸಿ ಬಂಧನ ಮಾಡಿದ್ರು. ಸಾರ್ವಜನಿಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಎಸ್ಟೇಟ್ ಮಾಲೀಕರ ವಿರುದ್ಧ ದೂರು ದಾಖಲಿಸಿ, ಜಿಂಕೆ ಸ್ಥಳಾಂತರಕ್ಕೆ ಮುಂದಾಗಿದ್ದಾರೆ. ಹೀಗಾಗಿ ದಿನಕ್ಕೆ ಮೂರು ಜಿಂಕೆಗಳಂತೆ ಹೊಸ್ಸೂರ್ ಎಸ್ಟೇಟ್ನಿಂದ ಹಾಸನದ ಗೆಂಡೆಕಟ್ಟೆ ಉದ್ಯಾನವನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಆ ಎಸ್ಟೇಟ್ನಿಂದ ಜಿಂಕೆಗಳು ಜಿಗಿದು ಹಾರಿ ಹೋಗದಂತೆ ಸಣ್ಣ ಬೇಲಿಯಿಂದ ಅವುಗಳನ್ನು ಕೂಡಿಹಾಕಲಾಗಿತ್ತು. ಇಷ್ಟು ವರ್ಷಗಳ ಕಾಲ ಬಂಧಿಯಾಗಿದ್ದ ಜಿಂಕೆ ಮರಿಗಳಿಗೆ ಅರಣ್ಯ ಇಲಾಖೆ ಮತ್ತೆ ಹೊಸಜೀವನ ಕೊಡಲು ಮುಂದಾಗಿದೆ. ವನ್ಯಜೀವಿ ವೈದ್ಯರ ಸಲಹೆ ಮೇರೆಗೆ ಅವುಗಳಿಗೆ ಅರವಳಿಕೆ ಮದ್ದು ನೀಡಿ, ಬಳಿಕ ಅವುಗಳನ್ನು ವಾಹನದ ಮೂಲಕ ಸಾಗಿಸಲಾಗುತ್ತಿದೆ.
ಜಿಂಕೆಗಳು ಅತಿಸೂಕ್ಷ್ಮ ಪ್ರಾಣಿ. ಕೆಲವೊಮ್ಮೆ ಅವುಗಳನ್ನು ಮುಟ್ಟುವುದಕ್ಕೆ ಸಾಧ್ಯವಾಗುವುದಿಲ್ಲ. ಜೊತೆಗೆ ಕೆಲವೊಂದು ವಾತಾವರಣಕ್ಕೆ ಅವು ಹೊಂದಿಕೊಳ್ಳುವುದು ಬಹಳ ಕಷ್ಟ. ಹಾಗಾಗಿ ಅರವಳಿಕೆ ನೀಡುವ ಮುನ್ನ ನಾವು ವಾತಾವರಣವನ್ನು ನೋಡಿಕೊಂಡು ನೀಡಬೇಕಾಗುತ್ತದೆ. ಜೊತೆಗೆ ಆರೋಗ್ಯದ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆ ಕೂಡಾ ಇರುವುದರಿಂದ ಅವುಗಳ ರಕ್ಷಣಾಕಾರ್ಯ ತುಂಬಾ ಕಷ್ಟ ಎನ್ನುತ್ತಾರೆ ವನ್ಯಜೀವಿ ವೈದ್ಯರಾದ ಮುರುಳಿ.
ಒಟ್ಟಾರೆ ಸ್ವಚ್ಛಂದವಾಗಿ, ಯಾರ ಹಂಗಿಲ್ಲದೆ ಕಾಡುಗಳಲ್ಲಿ ನಲಿದಾಡುತ್ತಾ, ಕುಣಿದಾಡುತ್ತಾ ಇದ್ದ ಜಿಂಕೆ ಮರಿಗಳನ್ನು ಮತ್ತೆ ಅದರದೇ ಪ್ರಪಂಚಕ್ಕೆ ಕಳುಹಿಸಿ ಕೊಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.