ಗದಗ : ಕಾರ ಹುಣ್ಣಿಮೆ ದಿನ ಕರಿ ಹರಿಯುವ ಸಂದರ್ಭದಲ್ಲಿ ಎತ್ತು ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಘಟನೆ ನಡೆದಿದ್ದು, 22 ವರ್ಷದ ಕಿರಣಕುಮಾರ ಮಲಕಾಜಪ್ಪ ನೆರ್ತಿ ಮೃತ ದುರ್ದೈವಿ.
ಕರಿ ಹರಿಯುವಾಗ ಗುದ್ದಿದ ಎತ್ತು; ಸೇನೆಗೆ ಸೇರಲು ಸಿದ್ಧತೆ ನಡೆಸಿದ್ದ ಯುವಕ ಸಾವು - ಕಾರ ಹುಣ್ಣಿಮೆ
ಎತ್ತುಗಳನ್ನು ಓಡಿಸುವ ಸ್ಪರ್ಧೆಯಲ್ಲಿ ವೇಗವಾಗಿ ಬಂದ ಎತ್ತು ಗುದ್ದಿ ಯುವಕ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಿನ್ನೆ ನಡೆದಿದೆ. ಸೇನೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಕಿರಣಕುಮಾರ ಮಲಕಾಜಪ್ಪ ನೆರ್ತಿ ಮೃತ ದುರ್ದೈವಿ.
ಓಟ ಸ್ಪರ್ಧೆಯಲ್ಲಿ ವೇಗವಾಗಿ ಬಂದ ಎತ್ತಿಗೆ ಕಿರಣಕುಮಾರ ಅಡ್ಡ ಬಂದಿದ್ದಾನೆ. ಈ ವೇಳೆ ಎತ್ತು ಬಲವಾಗಿ ಗುದ್ದಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ನಿನ್ನೆ ಸಂಜೆ ಸಾವನ್ನಪ್ಪಿದ್ದಾನೆ. ಮೃತ ಯುವಕ ಪದವೀಧರನಾಗಿದ್ದು, ತಂದೆ ನಿವೃತ್ತ ಸೈನಿಕ. ಯುವಕನೂ ತಂದೆಯ ಸೈನಿಕ ಕೋಟಾದಡಿ ಸೇನೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.
ಸೂರಣಗಿ ಗ್ರಾಮದ ದೊಡ್ಡ ಹನುಮಪ್ಪನ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಯಿಂದ ಕೋವಿಡ್ ನಿಯಮ ಉಲ್ಲಂಘಿಸಿ ಎತ್ತುಗಳನ್ನು ಓಡಿಸುವ ಹಬ್ಬ ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಕರಿ ಹರಿಯುವ ಹಬ್ಬದಲ್ಲಿ ರಭಸದಿಂದ ಓಡಿ ಬಂದ ಎತ್ತು ತನ್ನನ್ನು ಹಿಡಿಯಲು ಪ್ರಯತ್ನಿಸಿದ ಕಿರಣ್ ಕುಮಾರ್ ಹೊಟ್ಟೆಗೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದ. ನಿಯಮ ಮೀರಿ ಕರಿ ಹರಿಯುವ ಹಬ್ಬ ಆಯೋಜಿಸಿದ್ದ, ಸ್ಯಾನಿಟೈಸರ್, ಮಾಸ್ಕ್ ಹಾಗೂ ಸಾಮಾಜಿಕ ಅಂತರವಿಲ್ಲದೆ ಪಾಲ್ಗೊಂಡಿದ್ದ ಆರೋಪದಲ್ಲಿ ಶಿವು ಹುತ್ತಪ್ಪ ಮೂಲಿಮನಿ ಸೇರಿ 21 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.