ಗದಗ:ಮಾಸಾಶನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮಾಜಿ ಕುಸ್ತಿ ಪಟುಗಳು ತಟ್ಟೆಯಲ್ಲಿ ಮಣ್ಣು ಹಾಕಿಕೊಂಡು ಜಿಲ್ಲಾಡಳಿತ ಭವನದ ಎದುರು ವಿನೂತನ ಪ್ರತಿಭಟನೆ ನಡೆಸಿದರು. ಕಳೆದ 8 ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ಕುಸ್ತಿ ಪೈಲ್ವಾನರ ಸಂಘದ ನೇತೃತ್ವದಲ್ಲಿ ಮಾಜಿ ಕುಸ್ತಿ ಹಾಗೂ ಕಬಡ್ಡಿ ಪಟುಗಳು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಮಾಜಿ ಕುಸ್ತಿಪಟುಗಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಪ್ರತಿ ತಿಂಗಳು ದೊರೆಯುತ್ತಿದ್ದ ಮಾಸಾಶನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಕಳೆದ 8 ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗದ ಕಾರಣ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ಕೆಲ ವಯೋವೃದ್ಧ ಮಾಜಿ ಕುಸ್ತಿಪಟುಗಳ ಆರೋಗ್ಯ ಹದಗೆಟ್ಟಿದ್ದು, ಔಷಧೋಪಚಾರ ಪಡೆಯಲು ಪರದಾಡುವಂತಾಗಿದೆ.