ಗದಗ :ಮಾವು ಬೆಳೆಯುವಲ್ಲಿ ಗದಗ ತಾಲೂಕಿನ ಹುಲಕೋಟಿ ಗ್ರಾಮ ತುಂಬಾ ಫೇಮಸ್. ಈ ಊರಿನಲ್ಲಿ ಸುಮಾರು ಶೇ.80ರಷ್ಟು ರೈತರು ಮಾವಿನ ಬೆಳೆ ಬೆಳೆದು ಪ್ರತಿವರ್ಷ ಉತ್ತಮ ಆದಾಯ ಗಳಿಸುತ್ತಿದ್ದರು. ಆದ್ರೆ, ಮಾವು ಬೆಳೆಗೆ ಈ ವರ್ಷ ಜಿಗಿ ಹುಳು ಕಾಟದಿಂದ ಇಡೀ ಬೆಳೆ ನಾಶವಾಗಿದೆ. ಈ ಕೀಟ ಮಾವಿನ ಹೂಗಳನ್ನು ಸಂಪೂರ್ಣವಾಗಿ ತಿಂದು ಹಾಕಿ ವಿಷಕಾರಿ ಜೊಲ್ಲು ಬಿಟ್ಟು ಹೂವಿನ ಗೊಂಚಲು ಸುಡುವಂತೆ ಮಾಡಿಬಿಡುತ್ತಿದೆ. ಇದರಿಂದ ಹೆಚ್ಚಿನ ಮರಗಳಲ್ಲಿ ಹೂ ಕಾಯಿಯಾಗುವ ಮುನ್ನವೇ ಉದುರಿ ಹೋಗಿ ಸಂಪೂರ್ಣ ಫಸಲು ಹಾಳಾಗಿ ಹೋಗಿದೆ.
ಇನ್ನು ರೈತರು ಆರಂಭದಲ್ಲಿಯೇ ಸಾಕಷ್ಟು ಬಾರಿ ಔಷಧಿ ಸಿಂಪಡಿಸಿದ್ದಾರೆ. ಒಂದು ಬಾರಿ ಔಷಧಿ ಸಿಂಪಡಿಸಿ, ಸುಮಾರು 50 ಸಾವಿರ ರೂ. ವರೆಗೆ ಖರ್ಚು ಮಾಡಿದ್ದಾರೆ. ಹೀಗೆ ಸುಮಾರು 3-4 ಬಾರಿ ಲಕ್ಷಾಂತರ ರೂ. ಖರ್ಚು ಮಾಡಿ ಔಷಧಿ ಸಿಂಪಡಿಸಿದರೂ ಜಿಗಿ ಹುಳು ನಿಯಂತ್ರಣಕ್ಕೆ ಬಂದಿಲ್ಲ. ಇದು ಒಮ್ಮೆಗೆ 1,500 ಮರಿಗಳನ್ನ ಹಾಕುತ್ತೆ. ಹೀಗಾಗಿ, ಇಡೀ ತೋಟಕ್ಕೆ ತೋಟವೇ ನಾಶವಾಗಿದೆ.