ಗದಗ:ಆಸ್ಪತ್ರೆಗೆ ಹೋಗುತ್ತಿದ್ದಾಗ ಗರ್ಭಿಣಿಯೊಬ್ಬರು ಆಂಬ್ಯುಲೆನ್ಸ್ನಲ್ಲಿಯೇ ಮಗುವಿಗೆ ಜನ್ಮ ನೀಡಿದ ಘಟನೆ ಗದಗ ತಾಲೂಕಿನಲ್ಲಿ ನಡೆದಿದೆ. ಬಳಗಾನೂರು ಗ್ರಾಮದ ಸಲೀಮಾ ಮೆಹಬೂಬಸಾಬ ಮುದೆಪ್ಪನವರ ಮಗುವಿಗೆ ಜನ್ಮ ನೀಡಿದ ಮಹಿಳೆ. ದಾರಿ ಮಧ್ಯೆ 108 ವಾಹನದಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಕಾಲದಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿ ನೆರವಾಗಿದ್ದಾರೆ.
ಇಂದು ಬೆಳಿಗ್ಗೆ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಆಂಬ್ಯುಲೆನ್ಸ್ ಗ್ರಾಮಕ್ಕೆ ತೆರಳಿತ್ತು. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತರುವಾಗ ಹೆರಿಗೆ ನೋವು ಹೆಚ್ಚಾಗಿತ್ತು. ತಕ್ಷಣ ಎಚ್ಚೆತ್ತ ಆಂಬ್ಯುಲೆನ್ಸ್ ಸಿಬ್ಬಂದಿ, ಆಸ್ಪತ್ರೆ ತಲುಪುವದಕ್ಕಿಂತ ಮುಂಚೆಯೇ ವಾಹನದಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಸಮಯೋಚಿತ ಚಿಕಿತ್ಸೆ ನೀಡುವ ಮೂಲಕ ನರ್ಸಿಂಗ್ ಆಫೀಸರ್ ರವಿ ಬಡಿಗೇರ ಹಾಗೂ ಆಂಬ್ಯುಲೆನ್ಸ್ ಚಾಲಕ ದಸ್ತಗೀರಸಾಬ ಸುಸೂತ್ರ ಹೆರಿಗೆ ಮಾಡಿಸಿದ್ದಕ್ಕೆ ಕುಟುಂಬಸ್ಥರು ಧನ್ಯವಾದ ಸಲ್ಲಿಸಿದ್ದಾರೆ. ಸದ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಗದಗ ನಗರದ ದಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ.
ಇದನ್ನೂ ಓದಿ:ಟ್ರೈನ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ, ಚಿಕಿತ್ಸೆ ದೊರೆಯದೇ ವ್ಯಕ್ತಿ ಮೃತ.. ಒಂದೇ ರೈಲಿನಲ್ಲಿ ನಡೀತು ಹುಟ್ಟು-ಸಾವು!
ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ:ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯೆ 108 ಆಂಬ್ಯುಲೆನ್ಸ್‌ನಲ್ಲೇ ಹೆರಿಗೆಯಾದ ಘಟನೆ ಹುಬ್ಬಳ್ಳಿ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಗುಡೇನಕಟ್ಟೆ ಗ್ರಾಮದ ಆಫ್ರಿನ್ ದಾದಾಪೀರ ಅಜಮಕಾನವರ ಎಂಬುವವರೇ ಮಗುವಿಗೆ ಜನ್ಮ ನೀಡಿದ ತಾಯಿ. ಇವರಿಗೆ ಕಳೆದ ಮೇ 26ರಂದು ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬಸ್ಥರು 108ಕ್ಕೆ ಕರೆ ಮಾಡಿದಾಗ ಅಲ್ಪ ಸಮಯದಲ್ಲಿಯೇ ಆಂಬ್ಯುಲೆನ್ಸ್ ಮನೆಗೆ ಬಂದಿತ್ತು. ನಂತರ ಗರ್ಭಿಣಿಯನ್ನು ಕರೆದುಕೊಂಡು ಹೋಗುವಾಗ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದುದನ್ನು ನೋಡಿದ ಆಂಬ್ಯುಲೆನ್ಸ್ ಸಿಬ್ಬಂದಿ ಅಶೋಕ ಪೂಜಾರ ಮತ್ತು ಬಸವರಾಜ ರಾಥೋಡ ರಸ್ತೆಯ ಪಕ್ಕದಲ್ಲಿ ವಾಹನ ನಿಲ್ಲಿಸಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದರು. ಆಫ್ರಿನ್ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಲೂಕಾಸ್ಪತ್ರೆಗೆ ಸೇರಿಸಲಾಗಿತ್ತು. 108 ಸಿಬ್ಬಂದಿ ಬಸವರಾಜ ರಾಥೋಡ ಹಾಗೂ ಅಶೋಕ ಪೂಜಾರಗೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದರು.
ಇದನ್ನೂ ಓದಿ:ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ: ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಬಸ್ನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದ ಕಂಡಕ್ಟರ್: ಇತ್ತೀಚೆಗೆ ಸರ್ಕಾರಿ ಬಸ್ನಲ್ಲಿಯೇ ನಿರ್ವಾಹಕಿ ನೋವು ಕಾಣಿಸಿಕೊಂಡ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ಹೆರಿಗೆಗೆ ದಿನ ಹತ್ತಿರ ಬಂದಿದ್ದು, ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಹೋಗಲು ಆರ್ಥಿಕವಾಗಿ ಸಬಲವಾಗಿರ ಕಾರಣ ಗರ್ಭಿಣಿ ಕುಟುಂಬದ ಸದಸ್ಯರ ಜತೆ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಆಸ್ಪತ್ರೆಗೆ ಹೊರಟಿದ್ದರು. ಆ ಮಹಿಳೆ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದರು.
ಇದನ್ನೂ ಓದಿ:ಆರೋಗ್ಯ ಕೇಂದ್ರದ ಬಾಗಿಲು ಬಂದ್: ಆಸ್ಪತ್ರೆ ಹೊರಗೆ ಮಗುವಿಗೆ ಜನ್ಮ ನೀಡಿದ ಮಹಿಳೆ