ಗದಗ: ಅವರದ್ದು ತುಂಬು ಸಂಸಾರ. ಗಂಡ, ಹೆಂಡತಿ, ಮುದ್ದಾದ ಮಕ್ಕಳು. ಆನಂದ ಸಾಗರದಲ್ಲಿ ಸುಖೀ ಸಂಸಾರ ನಡೆಯುತ್ತಿತ್ತು.
ಆದ್ರೆ ಹೆಮ್ಮಾರಿ ಕೊರೊನಾ ಮನೆಯ ಯಜಮಾನನ್ನೇ ಬಲಿ ಪಡೆದುಕೊಂಡಿದೆ. ಈ ದುರಂತ ಮನೆ ಯಜಮಾನಿಗೆ ಬರಸಿಡಿಲು ಬಡಿದಂತಾಗಿತ್ತು. ಗಂಡನ ನಿಧನದ ನಂತರ ಆಘಾತದಿಂದ ಹೊರಬರಲಾಗದೆ ನೊಂದುಬೆಂದು ಹೋಗಿದ್ದ ಆಕೆ ಕೊನೆಗೆ ಆತ್ಮಹತ್ಯೆ ನಿರ್ಧಾರ ಮಾಡಿದ್ದರು. ಆದ್ರೆ, ವಿಧಿಯಾಟ ಎಂಬಂತೆ ಬದುಕುಳಿದರು. ಮಗು ಇನ್ನೂ ಪತ್ತೆಯಾಗಿಲ್ಲ.
ಕೊರೊನಾ ಕಡಿಮೆಯಾದರೂ ಅದು ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಮಲಪ್ರಭಾ ನದಿಗೆ ನಿನ್ನೆ ಮುಂಜಾನೆ ತಾಯಿ ತನ್ನ ಮೂವರು ಮಕ್ಕಳ ಜೊತೆಗೆ ನದಿಗೆ ಹಾರಿದ್ದರು. ಅದೃಷ್ಟವಶಾತ್ ಇಬ್ಬರು ಮಕ್ಕಳ ಪ್ರಾಣ ಉಳಿದಿದೆ. ಆದರೆ, ತಾಯಿ ಹಾಗೂ ಮೂರು ವರ್ಷದ ಮಗು ಮಲಪ್ರಭಾ ನದಿ ಪಾಲಾಗಿದ್ದರು. ಸತತ 8 ಗಂಟೆಗಳ ಕಾರ್ಯಾಚರಣೆ ನಡೆಸಿ, ಮಲಪ್ರಭಾ ನದಿಯ ಮುಳ್ಳುಕಟ್ಟಿಯಲ್ಲಿ ಸಿಲುಕಿದ್ದ ಉಮಾದೇವಿಯನ್ನು ರಕ್ಷಣೆ ಮಾಡಲಾಗಿತ್ತು. ಸದ್ಯ ಉಮಾದೇವಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ್ದ ಉಮಾದೇವಿ ಹೇಳಿದ್ದೇನು ಗೊತ್ತಾ? 'ಮತ್ತೆ ಈ ರೀತಿಯ ನಿರ್ಧಾರ ಮಾಡಲಾರೆ'
ಉಮಾದೇವಿ ಮಾಧ್ಯಮದೊಂದಿಗೆ ಮಾತನಾಡಿ, ತಾನು ಅನುಭವಿಸಿದ ರೋಧನೆಯನ್ನು ಎಳೆಎಳೆಯಾಗಿ ವಿವರಿಸಿದರು. ಕಳೆದ ಮೂರು ತಿಂಗಳ ಹಿಂದೆ ಪತಿ ಸಂಗಮೇಶ ನಿಧನ ಹೊಂದಿದ ಬಳಿಕ ಉಮಾದೇವಿ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರಂತೆ. ಸಂಕಷ್ಟ ಹೇಳಿಕೊಂಡರೂ ಅಕ್ಕಪಕ್ಕದ ಮನೆಯವರಾಗಲೀ, ಕುಟುಂಬಸ್ಥರಾಗಲೀ ನೆರವಿನ ಹಸ್ತ ಚಾಚಲಿಲ್ಲ. ಹೀಗಾಗಿ ನೊಂದು ನಾಲ್ವರು ಹೆಣ್ಣು ಮಕ್ಕಳ ಭವಿಷ್ಯದ ಕುರಿತು ವಿಚಾರ ಮಾಡಿ, ಕೊನೆಯದಾಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದರಂತೆ. ಆದರೆ ಅದೃಷ್ಟವಶಾತ್ ಆಕೆ ಬದುಕಿ ಬಂದಿದ್ದಾರೆ. ಇನ್ನೊಮ್ಮೆ ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರ ಮಾಡೋದಿಲ್ಲ ಎಂದಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಕೊರೊನಾದಿಂದ ಪತಿ ಸಾವನ್ನಪ್ಪಿದ್ದರಿಂದ ಉಮಾದೇವಿ ಬಹಳ ನೊಂದುಕೊಂಡಿದ್ದರು. ಹಾಗಾಗಿ ತನ್ನ ಮೂವರು ಮಕ್ಕಳ ಜೊತೆಗೆ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಸಾವೇ ತನ್ನ ಮುಂದಿನ ಹಾದಿ ಎಂದೇ ತೀರ್ಮಾನಿಸಿ ಮುಂಜಾನೆ ತನ್ನ ಮೂವರು ಹೆಣ್ಣುಮಕ್ಕಳ ಜೊತೆಗೆ ಮಲಪ್ರಭಾ ನದಿ ದಡಕ್ಕೆ ಬಂದಿದ್ದಾರೆ. ಅಮ್ಮನ ನೋವು ಅರಿತ ಪುಟ್ಟದಾದ ಇಬ್ಬರು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡಮ್ಮಾ ಎಂದು ಸೀರೆ ಎಳೆಯುವ ಪ್ರಯತ್ನ ಮಾಡಿದ್ದರಂತೆ. ಆದರೆ, ಉಮಾದೇವಿ ಮರುಯೋಚಿಸದೆ ಮೂರು ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿದ್ದರು.
ಮಗು ಇನ್ನೂ ಪತ್ತೆಯಾಗಿಲ್ಲ:
ಮೂರು ವರ್ಷದ ಮಗುವಿಗಾಗಿ ಹೊಳೆ ಆಲೂರು ಗ್ರಾಮದಲ್ಲಿ ಅಗ್ನಿಶಾಮಕ ಹಾಗೂ ಮೀನುಗಾರರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈವರೆಗೂ ಮಗು ಪತ್ತೆಯಾಗಿಲ್ಲ. ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ ಸಣ್ಣಪುಟ್ಟ ಗಾಯವಾಗಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.