ಗದಗ :ದೆಹಲಿ ಜಮಾತ್‌ಗೆ ಅನುಮತಿ ಮಾಡಿಕೊಟ್ಟವರಾರು ಎಂದು ಸರ್ಕಾರಕ್ಕೆ ವಿಧಾನ ಪರಿಷತ್ ನಾಯಕ ಎಸ್.ಆರ್. ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಮನುಕುಲದ ನಾಶಕ್ಕಾಗಿ ಕೋವಿಡ್ ಹುಟ್ಟಿ ಬಂದಿದೆ. ದೇಶದ ಪ್ರಧಾನಿ ಜನರ ಆರೋಗ್ಯ ಕಾಪಾಡಬೇಕು. ದೆಹಲಿ ಜಮಾತ್‌ಗೆ ಅನುಮತಿ ಮಾಡಿಕೊಟ್ಟವರಾರು? ದೆಹಲಿನಲ್ಲಿ ಜಮಾತ್ ನಿಲ್ಲಿಸಬಹುದಿತ್ತು. ಈ ಸಮಯದಲ್ಲಿ ಅಮಿತ್ ಶಾ ಏನು ಮಾಡ್ತಿದ್ರು.. ದೇಶ ಆರ್ಥಿಕವಾಗಿ ದಿವಾಳಿ ಆಗಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಾರಣ. ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದರು.
ಸರ್ಕಾರಕ್ಕೆ ಎಸ್.ಆರ್.ಪಾಟೀಲ್ ಪ್ರಶ್ನೆ ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ವೆಂಟಿಲೇಟರ್ ಖರೀದಿಯಲ್ಲಿ ಸಾಕಷ್ಟು ಗೋಲ್ಮಾಲ್ ಮಾಡಿದ್ದಾರೆ. ಬಿಜೆಪಿಯವರಿಗೆ ಮಧ್ಯಪ್ರದೇಶ ಸರ್ಕಾರ ಉರುಳಿಸಲು, ಟ್ರಂಪ್ ಭಾರತಕ್ಕೆ ಬರುವುದು ಮುಖ್ಯವಾಗಿತ್ತೇ ಹೊರತು ಜನರ ಆರೋಗ್ಯ ಮುಖ್ಯವಾಗಿರಲಿಲ್ಲ ಎಂದರು. ಬಿಜೆಪಿಗೆ ಜುಡಿಷಿಯಲ್ ಪವರ್ ಸಿಕ್ಕಿದೆಯೇನೋ ಗೊತ್ತಾಗ್ತಿಲ್ಲ. ಬ್ರಿಟಿಷ್ ಆಳ್ವಿಕೆ ವೇಳೆ ಜೈಲು, ನೇಣುಗಂಬ, ಲಾಠಿ, ಬೂಟಿನೇಟು, ಗುಂಡಿನ ಏಟಿಗೂ ಕಾಂಗ್ರೆಸ್ ಬಗ್ಗಿಲ್ಲ. ಬಿಜೆಪಿ ನೋಟಿಸ್ ಇದ್ಯಾವ ಗಿಡದ ತಪ್ಪಲು, ನೋಟಿಸ್ಗೆ ಕಾಂಗ್ರೆಸ್ ಹೆದರುವುದಿಲ್ಲ ಎಂದರು.
ಇನ್ನು, ಭೂಸುಧಾರಣಾ ಕಾಯ್ದೆ ಕರ್ನಾಟಕ ರಾಜ್ಯದ ರೈತರ ಪಾಲಿಗೆ ಮರಣ ಶಾಸನವಾಗಿದೆ. ರೈತರ ಶವದ ಪೆಟ್ಟಿಗೆಗೆ ಮೊಳೆ ಹೊಡೆದಂತೆ ಮಾಡಿದೆ. ಉಳ್ಳವರಿಗೆ ಅನುಕೂಲ ಮಾಡಿಕೊಡಲು ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದೆ. ಸರ್ಕಾರದ ಭೂ ಸುಧಾರಣೆಯ ನಿರ್ಧಾರ ಕಪ್ಪುಹಣ, ಬಿಳಿ ಹಣ ಮಾಡಲು ಬಹು ದೊಡ್ಡ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.