ಗದಗ :ನವಿಲುತೀರ್ಥ ಡ್ಯಾಂ ನಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ್ದರಿಂದ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಕೊಣ್ಣೂರ ಬಳಿಯ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.
ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿ: ರಾಷ್ಟ್ರೀಯ ಹೆದ್ದಾರಿ ಬಂದ್ - Dam latest news
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ನವಿಲುತೀರ್ಥ ಡ್ಯಾಂ ಭರ್ತಿಯಾಗಿದ್ದು ಇಲ್ಲಿಂದ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದು ಈ ಮಾರ್ಗದ ಸಂಚಾರ ಬಂದ್ ಮಾಡಲಾಗಿದೆ. ಇನ್ನು ಈ ಮಾರ್ಗದ ಬದಲಾಗಿ ಹುಬ್ಬಳ್ಳಿ-ನರಗುಂದ-ರೋಣ ಮಾರ್ಗದಿಂದ ಬಾಗಲಕೋಟೆ, ವಿಜಯಪುರ ಮಾರ್ಗ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಸದ್ಯ ಬೆಳಗಾವಿಯ ಖಾನಾಪುರ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮಲಪ್ರಭಾ ಜಲಾಶಯದ ಒಳ ಹರಿವಿನಲ್ಲಿ ಇಳಿಮುಖವಾಗಿದೆ. ಆದರೆ ಬೆಳಗ್ಗೆಯಿಂದ ಹೊರಹರಿವಿನಲ್ಲಿ ವ್ಯತ್ಯಾಸವಾಗಿಲ್ಲ. ಬೆಳಿಗ್ಗೆಯಿಂದ 25 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಿಗೆ ಸಾಕಷ್ಟು ತೊಂದರೆಯಾಗಿದೆ. ಸಾಕಷ್ಟು ಬೆಳೆ ನಾಶವಾಗಿದೆ ಎಂಬ ವರದಿ ಬಂದಿದೆ.