ಗದಗ: ಗದಗ ಜಿಲ್ಲೆ ನರಗುಂದ ತಾಲೂಕಿನ ರೈತರೊಬ್ಬರು ಹಲವು ವರ್ಷಗಳ ಹಿಂದೆ ತಯಾರಿಸಿದ್ದ ಜಲ ವಿದ್ಯುತ್‌ಗಾರದ ಫೋಟೋವನ್ನು ಖ್ಯಾತ ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ರೈತ ನಿರ್ಮಿಸಿದ್ದ ಜಲವಿದ್ಯುತ್‌ಗಾರದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನರಗುಂದ ಸಮೀಪದ ಬಂಡೆಮ್ಮನಗರ ನಿವಾಸಿ ಸಿದ್ದಪ್ಪ ಹುಲಜೋಗಿ ಎಂಬುವವರು ತಯಾರಿಸಿದ್ದ ಜಲವಿದ್ಯುತ್‌ಗಾರದ ಛಾಯಾಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್, ರೈತನ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಕೇವಲ 5 ಸಾವಿರ ರೂ. ವೆಚ್ಚದಲ್ಲಿ ಮಾಡಿರುವ ರೈತ, 150 ವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ವರ್ಷದ ಕೆಲವೇ ತಿಂಗಳು ಹರಿಯುವ ಕಾಲುವೆ ನೀರಿನಿಂದ ರೈತರು ವಿದ್ಯುತ್ ತಯಾರಿಸುವುದಾದರೆ, ವರ್ಷವಿಡೀ ನೀರು ಹರಿದರೆ ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸಬಹುದು. ಹೆಚ್ಚಿನ ಸಂಪನ್ಮೂಲವಿಲ್ಲದೇ, ಗ್ರಾಮೀಣ ಭಾಗದಲ್ಲಿ ಬಹುದೊಡ್ಡ ಬದಲಾವಣೆ ತರಲು ಸಿದ್ದಪ್ಪ ಅವರ ಪ್ರಯತ್ನ ಮಾದರಿಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ಅವರು ಇದನ್ನು ಪೋಸ್ಟ್ ಮಾಡಿದ ಒಂದೇ ದಿನದಲ್ಲಿ ಸುಮಾರು 14 ಸಾವಿರ ಜನರು ಲೈಕ್ ಮಾಡಿದ್ದಾರೆ. ಜೊತೆಗೆ ಸಚಿವ ಸುರೇಶ್‌ಕುಮಾರ್ ಸೇರಿದಂತೆ ಅನೇಕ ಗಣ್ಯರು ಕೂಡಾ ಲೈಕ್ ಮಾಡಿದ್ದಾರೆ. ಕ್ರಿಕೆಟಿಗ ಲಕ್ಷ್ಮಣ್ ಅವರು ಟ್ವೀಟ್ ಮಾಡಿರುವುದಕ್ಕೆ ರೈತ ಸಿದ್ದಪ್ಪ ಹುಲಜೋಗಿ ಸಂತಸಗೊಂಡಿದ್ದಾರೆ.
2011-12ರಲ್ಲಿ ಜಲ ವಿದ್ಯುತ್‌ಗಾರವನ್ನು ಸಿದ್ಧಪಡಿಸಿದ್ದ ರೈತ ಸಿದ್ಧಪ್ಪ, ಮಲಪ್ರಭಾ ಬಲದಂಡೆ ಕಾಲುವೆಯಲ್ಲಿ ಪ್ರಯೋಗಿಸಿದ್ದರು. ಪ್ಲಾಸ್ಟಿಕ್ ಪುಟ್ಟಿಗಳನ್ನು ಅಳವಡಿಸಿದ ಚಕ್ರ ತಿರುಗುವುದರಿಂದ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಈ ವಿದ್ಯುತ್ ಅನ್ನು ಬಂಡೆಮ್ಮನಗರದ ತೋಟದ ಮನೆಗೆ ಬಳಕೆ ಮಾಡುತ್ತಿದ್ದರು. ಆದರೆ, ಕಾಲುವೆಯಲ್ಲಿ ನೀರಿನ ಕೊರತೆ ಹಾಗೂ ಹೆಸ್ಕಾಂ ಲೈನ್ ಬಂದಿದ್ದರಿಂದ ವಿದ್ಯುತ್ ಉತ್ಪಾದನೆಯನ್ನು ಕೈಬಿಟ್ಟಿದ್ದರು. ರೈತರು ಹಾಗೂ ಗ್ರಾಮೀಣ ಜನರ ಅನುಕೂಲಕ್ಕಾಗಿ ಇದರಲ್ಲಿ ಮತ್ತಷ್ಟು ಸುಧಾರಣೆ ತಂದು, ಹೊಸ ಮಾದರಿಯಲ್ಲಿ ವಿದ್ಯುತ್ ಉತ್ಪಾದನಾ ಉಪಕರಣಗಳನ್ನು ಆವಿಷ್ಕರಿಸುವ ಆಲೋಚನೆಯನ್ನು ಮೊದಲು ಸಿದ್ದಪ್ಪ ಹೊಂದಿದ್ದರು.