ಗದಗ: ಹಲವು ದಶಕಗಳಿಂದ ಚರಂಡಿ ಒತ್ತುವರಿ ಮಾಡಿಕೊಂಡು ನೂರಾರು ಮನೆ ಮಾಲೀಕರು ಜೀವನ ಸಾಗಿಸುತ್ತಿದ್ದರು. ಆದ್ರೆ ಇದೀಗ ಅಧಿಕಾರಿಗಳು ಒತ್ತುವರಿ ಜಾಗವನ್ನು ತೆರವುಗೊಳಿಸುತ್ತಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಚರಂಡಿ ಮೇಲೆ ನಿರ್ಮಿಸಿದ ಮನೆಗಳನ್ನ ತೆರವುಗೊಳಿಸುತ್ತಿರುವ ಅಧಿಕಾರಿಗಳು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಚರಂಡಿ ಮೇಲೆ ನಿರ್ಮಿಸಿದ ಮನೆಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಅಲ್ಲಿನ ಗ್ರಾಮ ಪಂಚಾಯತಿ ಸಿಬ್ಬಂದಿ ನಿರತರಾಗಿದ್ದಾರೆ. ಈಗಾಗಲೇ ಸುಮಾರು ನೂರಕ್ಕೂ ಹೆಚ್ಚು ಮನೆಗಳನ್ನು ಹಾಗೂ ದೇವಸ್ಥಾನಗಳನ್ನು ತೆರವುಗೊಳಿಸಿದ್ದಾರೆ. ಆದ್ರೆ ಗ್ರಾಮದ ಶ್ರೀಮಂತರ ಮನೆಗಳನ್ನು ತೆರವುಗೊಳಿಸುವುದಕ್ಕೆ ಹಿಂದೇಟು ಹಾಕ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಗ್ರಾಮದ ಮುಖ್ಯ ಮಾರ್ಕೆಟ್ ರಸ್ತೆಯಲ್ಲಿ ಚರಂಡಿ ಮೇಲೆ ಕಟ್ಟಿರುವ ಮನೆಗಳನ್ನು ಕೆಡವಿದ್ದಾರೆ. ಆದ್ರೆ ಅದೇ ಸಾಲಿನಲ್ಲಿ ಬರುವ ಬಟ್ಟೆ ಮಾಲೀಕರಾದ ಗೌಸೂದ್ ಸಾಬ್ ಹೊಸಪೇಟೆ ಅವರ ಮನೆಯನ್ನು ಮಾತ್ರ ತೆರವುಗೊಳಿಸಿಲ್ಲ, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ತೆರವು ಕಾರ್ಯಾಚರಣೆ ಸುಮಾರು 15 ದಿನಗಳಿಂದ ನಡೆಯುತ್ತಿದ್ದು, ತಮಗೆ ಎಲ್ಲಿ ಬೇಕೋ ಅಥವಾ ತಮ್ಮ ಕಾರ್ಯಕ್ಕೆ ಯಾರು ವಿರೋಧ ಮಾಡುವುದಿಲ್ಲವೋ ಅಂತವರ ಮನೆಗಳನ್ನು ತೆರವುಗೊಳಿಸುತ್ತಿದ್ದಾರೆ. ಈ ಕುರಿತು ಗ್ರಾಮ ಪಂಚಾಯತಿ ಅಧಿಕಾರಿಗಳನ್ನ ಪ್ರಶ್ನೆ ಮಾಡಿದರೆ ಧಮ್ಕಿ ಹಾಕ್ತಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.