ಗದಗ:ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರು ಗ್ರಾಮವೊಂದರಲ್ಲಿ ನಿರ್ಮಾಣಗೊಂಡಿದ್ದ ಬಸ್ ನಿಲ್ದಾಣವನ್ನು ಎಮ್ಮೆ ಮೂಲಕ ಉದ್ಘಾಟನೆ ಮಾಡಿಸಲಾಗಿದೆ. ಶಾಸಕ ಮತ್ತು ಸಂಸದರ ಗಮನ ಸೆಳೆಯಲು ಅಲ್ಲಿಯ ಗ್ರಾಮಸ್ಥರೇ ಸೇರಿಕೊಂಡು ನಿರ್ಮಾಣ ಮಾಡಲಾದ ತಾತ್ಕಾಲಿಕ ಬಸ್ ನಿಲ್ದಾಣವನ್ನು ಈ ರೀತಿ ಎಮ್ಮೆಯಿಂದ ರಿಬ್ಬನ್ ಕಟ್ ಮಾಡಿಸುವ ಮೂಲಕ ಉದ್ಘಾಟನೆ ಮಾಡಿದರು.
ಎಮ್ಮೆಯಿಂದ ಬಸ್ ನಿಲ್ದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು ಇದೊಂದು ವಿನೂತನ ಪ್ರತಿಭಟನೆಯಾಗಿದ್ದು, ಬಸ್ ನಿಲ್ದಾಣ ಉದ್ಘಾಟಿಸುವ ವೇಳೆ ಗ್ರಾಮಸ್ಥರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಎಮ್ಮೆ ನೋಡುಗರ ಗಮನ ಸೆಳೆಯಿತು. ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಒತ್ತಾಯಿಸಿದರೂ, ಯಾರೂ ಕೂಡ ತಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲವಂತೆ. ಇದರಿಂದ ರೋಸಿಹೋದ ಗ್ರಾಮಸ್ಥರು ಈ ರೀತಿಯಾಗಿ ವಿನೂತನವಾಗಿ ಪ್ರತಿಭಟನೆ ಮಾಡಿದರು. ಬಸ್ಗಾಗಿ ಗ್ರಾಮಸ್ಥರು ರಸ್ತೆಯಲ್ಲಿ ನಿಲ್ಲಬೇಕು. ಇಲ್ಲವೇ ಪಕ್ಕದ ಟೀ ಅಂಗಡಿಯಲ್ಲಿ ಕುಳಿತುಕೊಳ್ಳಬೇಕು. ಅದರಲ್ಲೂ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರಿಗೆ ಬಸ್ ನಿಲ್ದಾಣದ ಕೊರತೆ ಗ್ರಾಮದಲ್ಲಿ ಹೇಳತೀರದ್ದಾಗಿದೆ.
ಇದನ್ನು ಅರಿತು ಬಸ್ ನಿಲ್ದಾಣಕ್ಕಾಗಿ ಗ್ರಾಮಸ್ಥರೆಲ್ಲ ಸೇರಿ ಸಾಕಷ್ಟು ಬಾರಿ ಮನವಿ ಕೂಡ ಸಲ್ಲಿಸಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಯಾರೂ ಸಹ ಇವರ ಸಮಸ್ಯೆಗೆ ಸ್ಪಂದಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಬೇರೆ ದಾರಿ ಕಾಣದ ಇಲ್ಲಿಯ ಜನ ಗ್ರಾಮದಲ್ಲಿನ ಒಂದು ಆವರಣದಲ್ಲಿ ತೆಂಗಿನ ಗರಿಗಳ ಮೂಲಕ ಚಪ್ಪರ ಹಾಕಿ ಅದರ ಮೇಲೆ ಇದು ಶಾಸಕರ ಮತ್ತು ಸಂಸದರ ಅನುದಾನದಲ್ಲಿ ನಿರ್ಮಾಣವಾದ ಹೊಸ ಬಸ್ ನಿಲ್ದಾಣ ಅಂತ ವ್ಯಂಗ್ಯವಾಗಿ ಬ್ಯಾನರ್ ಹಾಕಿದ್ದಾರೆ. ಜೊತೆಗೆ ಎಮ್ಮೆ ಮೂಲಕ ರಿಬ್ಬನ್ ಕಟ್ ಮಾಡಿಸಿದ್ದಾರೆ. ಈ ಮೂಲಕ ಈ ಭಾಗದ ಶಾಸಕರು ಮತ್ತು ಸಂಸದರು ಎಮ್ಮೆಗಿಂತಲೂ ಕನಿಷ್ಠ ಅಂತ ಕಿಡಿಕಾರಿದ್ದಾರೆ.
ಎಮ್ಮೆಯಿಂದ ಬಸ್ ನಿಲ್ದಾಣ ಉದ್ಘಾಟನೆ ಮಾಡಿಸಿದ ಗ್ರಾಮಸ್ಥರು ಕಳೆದ ಒಂದು ವರ್ಷದಿಂದ ಬಸ್ ನಿಲ್ದಾಣ ನಿರ್ಮಾಣ ಮಾಡಿ ಅಂತ ದುಂಬಾಲು ಬಿದ್ದರೂ ಸಹ ಅನುದಾನ ಇಲ್ಲ ಅಂತ ಕಥೆ ಹೇಳ್ತಿದ್ದಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಈಗಲಾದರೂ ನಮ್ಮೂರಿಗೆ ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಿ ಎಂದು ಜನಪ್ರತಿನಿಧಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ:ಯಾವುದೇ ಸರ್ಕಾರಿ ಶಾಲೆ ಮುಚ್ಚಲ್ಲ, ಅಗತ್ಯ ಬಿದ್ದರೆ ಎರಡು ಮೂರು ಶಾಲೆ ಸಂಯೋಜನೆ: ಸಚಿವ ನಾಗೇಶ್