ಗದಗ :ಇಂದು ಮಧ್ಯಾಹ್ನ ಜಿಲ್ಲೆಯಾದ್ಯಂತ ಹಲವೆಡೆ ಆಲಿಕಲ್ಲು ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಕುರಿಗಾಯಿ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆ ಗದಗ ತಾಲೂಕಿನ ಲಿಂಗದಾಳ ಗ್ರಾಮದಲ್ಲಿ ನಡೆದಿದೆ. ಶರಣಪ್ಪ (20) ಹಾಗೂ ದೇವೇಂದ್ರಪ್ಪ (16) ಮೃತಪಟ್ಟ ಕುರಿಗಾಯಿ ಯುವಕರು. ಸುನೀಲ ಎಂಬಾತ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗುಡುಗು ಸಹಿತ ಜೋರು ಮಳೆ ಸುರಿಯುವ ಸಂದರ್ಭದಲ್ಲಿ ಕುರಿಗಳ ಮಂದೆಯಲ್ಲಿ ತಾಡಪಲ್ ಹೊದ್ದುಕೊಂಡು ಯುವಕರು ಒಟ್ಟಿಗೆ ಕುಳಿತಿದ್ದರು. ಇನ್ನೊಬ್ಬ ಬಾಲಕ ಮತ್ತೊಂದೆಡೆ ಕುಳಿತಿದ್ದ. ಈ ವೇಳೆ ಸಿಡಿಲು ಬಡಿದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ :ರಾಜ್ಯದ 5 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ: ಎಚ್ಚರಿಕೆ ವಹಿಸಲು ಡಿಸಿಗಳಿಗೆ ಸೂಚನೆ
ಆಲಿಕಲ್ಲು ರಾಶಿ:ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಸುರಿದ ಅಕಾಲಿಕ ಮಳೆಯಿಂದ ಬೆಳೆ ನೆಲಕಚ್ಚಿವೆ. ಮತ್ತೊಂದೆಡೆ ಬಿಸಿಲಿನ ತಾಪಕ್ಕೆ ಕಂಗಾಲಾಗಿದ್ದ ಜನರು ಮಳೆಯಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಹಲವೆಡೆ ಆಲಿಕಲ್ಲು ಮಳೆಯಾಗಿ ಆ ಪ್ರದೇಶಗಳು ಹಿಮಪಾತದಂತೆ ಕಾಣುತ್ತಿದ್ದವು. ಮನೆ ಮುಂದಿನ ಅಂಗಳವೆಲ್ಲ ಆಲಿಕಲ್ಲುಗಳಿಂದ ತುಂಬಿದ್ದವು. ಮನೆಯ ಮೇಲೆ ಹಾಗೂ ಅಂಗಳದ ತುಂಬಾ ರಾಶಿ ರಾಶಿಯಾಗಿ ಬಿದ್ದಿದ್ದು, ಜಿಲ್ಲೆಯಲ್ಲಿ ಈ ರೀತಿ ಯಾವತ್ತೂ ಆಲಿಕಲ್ಲು ಮಳೆಯಾಗಿದ್ದನ್ನು ನಾವು ನೋಡಿರಲಿಲ್ಲ. ಇದೇ ಮೊದಲ ಬಾರಿಗೆ ಬಾರಿ ಈ ಪ್ರಮಾಣದ ಆಲಿಕಲ್ಲು ನೋಡಿದ್ದೇವೆ ಎಂದು ಕೊತಬಾಳ ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಗದಗನಲ್ಲಿ ಮನೆಗಳ್ಳತನ ತಡೆಯಲು ಪೊಲೀಸ್ ಇಲಾಖೆಯಿಂದ ನೂತನ ಐಡಿಯಾ