ಗದಗ: ಮೊಹರಂ ಮೆರವಣಿಗೆ ವೇಳೆ ಯುವಕರಿಬ್ಬರಿಗೆ ಚಾಕು ಇರಿದ ಘಟನೆ ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ನಡೆದಿದೆ. ತೌಸಿಫ್ ಹೊಸಮನಿ (23) ಹಾಗೂ ಮುಸ್ತಾಕ್ ಹೊಸಮನಿ (24) ಹಲ್ಲೆಗೊಳಗಾದವರು.
ಘಟನೆ ಸಂಬಂಧಎಸ್ಪಿ ಶಿವಪ್ರಕಾಶ್ ದೇವರಾಜು ಪ್ರತಿಕ್ರಿಯೆ ಮೊಹರಂ ಮೆರವಣಿಯಲ್ಲಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆ ಬಿಡಿಸಲು ಬಂದಿದ್ದ ತೌಸಿಫ್ ಹಾಗೂ ಮುಸ್ತಾಫ್ನಿಗೆ ಸೋಮೇಶ್ ಗುಡಿ ಎಂಬಾತ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಗಾಯಾಳುಗಳನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಳವಾದ ಗಾಯಗಳಾಗಿರುವುದರಿಂದ ತೌಸಿಫ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಎಸ್ಪಿ ಶಿವಪ್ರಕಾಶ್ ದೇವರಾಜು, ಗಂಭೀರವಾಗಿ ಗಾಯಗೊಂಡಿರೋ ತೌಸಿಫ್ ಅವರಿಗೆ ಚಿಕಿತ್ಸೆ ಕೊಡಿಸುವುದು ಮೊದಲ ಆದ್ಯತೆ. ಈಗಾಗಲೇ ಘಟನೆ ಸಂಬಂಧ ಯಲ್ಲಪ್ಪ ಹಾಗೂ ಸೋಮು ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ತಿಳಿಸಿದರು.
ಅಮಾಯಕರ ಮೇಲೆ ನಡೆದ ಹಲ್ಲೆ:ಮಲ್ಲಸಮುದ್ರ ಗ್ರಾಮದ ತೌಸಿಫ್, ಮುಸ್ತಾಕ್ ಸಂಭಾವಿತರಾಗಿದ್ದರು. ಮುಸ್ತಾಕ್ ಕಾಲೇಜು ಹೋಗುತ್ತಿದ್ದ ಹುಡುಗ ತೌಸಿಫ್ ಬಿಲ್ಲಿಂಗ್ ಕೆಲಸ ಮಾಡುತ್ತಿದ್ದ. ಇಬ್ಭರು ತಂಟೆ ತಕರಾರು ಅಂತಾ ಹೋದವರಲ್ಲ. ಹೀಗಿದ್ದರೂ ಇಬ್ಬರನ್ನ ಟಾರ್ಗೆಟ್ ಮಾಡಿ ಹಲ್ಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ:ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಸ್ಪತ್ರೆಗೆ ಎಸ್ಪಿ ಶಿವಪ್ರಕಾಶ್ ದೇವರಾಜು, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಬಳಿಕ ಮಲ್ಲಸಮುದ್ರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಡಿಆರ್ ವಾಹನ ನಿಯೋಜನೆ ಮಾಡಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಗದಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:13 ವರ್ಷದ ಬಾಲಕನ ಬೈಕ್ ಸವಾರಿಗೆ ಬಾಲಕಿ ಬಲಿ: ಮಗನೊಂದಿಗೆ ತಂದೆ ಕೂಡ ಅರೆಸ್ಟ್