ಗದಗ: ಗಂಡ-ಹೆಂಡತಿಯ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದ ಎರಡು ಜೋಡಿಗಳು ಇದೀಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ್ ಅದಾಲತ್ನಲ್ಲಿ ಮತ್ತೆ ಒಂದಾಗಿರುವ ಘಟನೆ ನಡೆದಿದೆ.
ಗದಗ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್ ಹೌದು, ಗದಗ ಜಿಲ್ಲೆಯ ರವಿಕುಮಾರ್ ಸೊಪ್ತಿಮಠ ಹಾಗೂ ಕೊಪ್ಪಳ ಮೂಲದ ಪೂಜಾ ಎನ್ನುವವರು 2014 ರಲ್ಲಿ ಮದುವೆಯಾಗಿದ್ದರು. ಆದರೆ ಎರಡು ಮಕ್ಕಳಾದ ಮೇಲೆ ಕೌಟುಂಬಿಕ ಕಲಹ ಆರಂಭವಾಗಿತ್ತು. ಜೊತೆಗೆ ಮನೆಯಲ್ಲಿ ಅತ್ತೆ ಹಾಗೂ ನಾದಿನಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗಂಡ ರವಿಕುಮಾರ್ ಅವರನ್ನು ಬಿಟ್ಟು ಪೂಜಾ ತವರು ಮನೆಗೆ ಬಂದಿದ್ದಳು. ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಗಂಡ-ಹೆಂಡತಿ ಮತ್ತೆ ಒಂದಾಗಿ ಬಾಳುತ್ತೇವೆ ಎಂದು ನಿರ್ಧರಿಸಿ ಲೋಕ್ ಅದಾಲತ್ನಲ್ಲಿ ಒಂದಾಗಿದ್ದಾರೆ.
ಇನ್ನು ಗದಗ ಜಿಲ್ಲೆಯ ಅಶೋಕ ಮಲ್ಲಸಮುದ್ರ ಹಾಗೂ ಸುಧಾ ಎನ್ನುವರು ಕಳೆದ 16 ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ 10 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು. ಇವರ ಜಗಳದಲ್ಲಿ ಎರಡು ಗಂಡು ಮಕ್ಕಳು ಅನಾಥರಂತೆ ವಾಸವಾಗಿದ್ದರು. ಈ ಕುರಿತು ಕಳೆದ ಹಲವಾರು ವರ್ಷಗಳಿಂದ ಕೋರ್ಟ್ನಲ್ಲಿ ಕೇಸ್ ನಡೆಯುತ್ತಿತ್ತು. ಆದರೆ ನ್ಯಾಯಾಧೀಶರ ಸಮ್ಮುಖದಲ್ಲಿ ಗಂಡ, ಹೆಂಡತಿ ಒಪ್ಪಿಗೆ ಪಡೆದು ಮತ್ತೊಮ್ಮೆ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ.
ಜಿಲ್ಲೆಯಾದ್ಯಂತ ನಡೆದ ಲೋಕ್ ಅದಾಲತ್ನಲ್ಲಿ ನಿನ್ನೆ ಸುಮಾರು 4 ಸಾವಿರ ಕೇಸ್ಗಳನ್ನು ಇತ್ಯರ್ಥ ಮಾಡಲು ಉದ್ದೇಶಿಸಿದ್ದು, ಸರ್ಕಾರಿ, ಸಿವಿಲ್ ಸೇರಿದಂತೆ ಆಯ್ದ ಕೇಸ್ಗಳಿಗೆ ಅಂತ್ಯ ಹಾಡಿ ಕಕ್ಷಿದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ನ್ಯಾಯಾಧೀಶರು ಮಾಡಿದ್ದಾರೆ.