ಕರ್ನಾಟಕ

karnataka

By

Published : Aug 15, 2023, 9:38 PM IST

ETV Bharat / state

ಗದಗ: ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಇಬ್ಬರು ಬಾಲಕರು ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತಿಬ್ಬರನ್ನು ರಕ್ಷಣೆ ಮಾಡಿರುವ ಘಟನೆ ನಡೆದಿದೆ.

crime-two-boys-drowned-in-the-pit-at-gadaga
ಗದಗದಲ್ಲಿ ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು

ಗದಗ: ಜಾನುವಾರು ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲಾಗಿದ್ದು, ಮಹಿಳೆ ಹಾಗೂ ಮತ್ತೊಬ್ಬ ಬಾಲಕನನ್ನು ರಕ್ಷಣೆ ಮಾಡಿದ ಘಟನೆ ಇಂದು ಮಧ್ಯಾಹ್ನ ಗದಗದ ರಹಮತ್ ನಗರ ಬಳಿಯ ರೈಲ್ವೆ ಹಳಿ ಸಮೀಪ ಸಂಭವಿಸಿದೆ. ಮಹಮ್ಮದ್ ಅಮನ್ ಹಾಗೂ ಸಂತೋಷ ಮೃತಪಟ್ಟ ಬಾಲಕರು. ಮಹಮ್ಮದ್ ಆದಿಲ್ ಹಾಗೂ ಮಹಿಳೆ ಶಾಹೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ಹೇಗಾಯ್ತು?: ಮಹಿಳೆ ಹಾಗೂ ಮೂವರು ಬಾಲಕರು ನೀರಿನ ಹೊಂಡದ ಬಳಿ ಹೋದಾಗ ಇಬ್ಬರು ಬಾಲಕರು ಕಾಲು ಜಾರಿ ಬಿದ್ದಿದ್ದಾರೆ. ರಕ್ಷಣೆಗೆ ಹೋಗಿದ್ದ ಮಹಿಳೆ ಹಾಗೂ ಮತ್ತೊಬ್ಬ ಬಾಲಕನೂ ನೀರಲ್ಲಿ ಮುಳುಗಿದ್ದಾರೆ. ಮುಳುಗುತ್ತಿದ್ದವರ ಕೂಗು ಕೇಳಿದ ರಾಜ್ ಸಿಂಗ್ ಎಂಬ ವ್ಯಕ್ತಿ ಮಹಿಳೆ ಹಾಗೂ ಓರ್ವ ಬಾಲಕನನ್ನು ರಕ್ಷಿಸಿದ್ದಾರೆ. ಆದರೆ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ.

ವಿಷಯ ತಿಳಿದ ಶಹರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಬಿ.ಪಾಟೀಲ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ನೀರುಪಾಲಾದ ಬಾಲಕರಿಗೆ ಶೋಧ ನಡೆಸುತ್ತಿದ್ದಾರೆ. ಬಾಲಕರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಎಸ್​ಪಿ ಬಿ.ಎಸ್. ನೇಮಗೌಡ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ.ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಇದನ್ನೂ ಓದಿ:ಧಾರವಾಡ: ಹೆದ್ದಾರಿ ಡಿವೈಡರ್​ಗೆ ಕಾರು ಡಿಕ್ಕಿ.. ಇಬ್ಬರು ಸಾವು

ಬಾಲಕನನ್ನು ರಕ್ಷಿಸಲು ಹೋಗಿ ನಾಲ್ವರು ಸಾವು:ಸಿದ್ದಗಂಗಾ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಯಲ್ಲಿ (ಕೃಷಿ ಹೊಂಡದಂತಿರುವ ಕೆರೆ) ಬಿದ್ದು ನಾಲ್ವರು ಮೃತಪಟ್ಟಿರುವ ಘಟನೆ ಆ.13 ನಡೆದಿತ್ತು. ಬಾಗಲಗುಂಟೆಯ ಲಕ್ಷ್ಮೀ (33) ಹಾಗೂ ಯಾದಗಿರಿ ಜಿಲ್ಲೆಯ ಅಫಜಲಪುರದ ಮಹದೇವಪ್ಪ (44) ಚಿಕ್ಕಮಗಳೂರಿನ ಶಂಕರ್ (11), ರಾಮನಗರದ ಹರ್ಷಿತ್ (11) ಮೃತಪಟ್ಟಿದ್ದರು.

ರಂಜಿತ್​, ಶಂಕರ್​, ಹರ್ಷಿತ್​ ಮಠದಲ್ಲಿ 6ನೇ ತರಗತಿಯನ್ನು ಓದುತ್ತಿದ್ದರು. ರಂಜಿತ್‌ನ​ ತಾಯಿ ಲಕ್ಷ್ಮೀ ಮಗನನ್ನು ಭೇಟಿಯಾಗಲು ಮಠಕ್ಕೆ ಬಂದಿದ್ದರು. ಈ ವೇಳೆ ಅವರು ಊಟಕ್ಕೆ ಮಠದ ಹಿಂಭಾಗದಲ್ಲಿರುವ ಗೋ ಕಟ್ಟೆಗೆ ತೆರಳಿದ್ದರು. ಬಳಿಕ ರಂಜಿತ್​ ಗೋ ಕಟ್ಟೆಗೆ ಈಜಲು ತೆರಳಿ, ಈಜು ಸಾಧ್ಯವಾಗದೆ ಮುಳುಗಿದ್ದರು. ಇದನ್ನು ನೋಡಿದ ತಾಯಿ ನೀರಿಗೆ ಹಾರಿ ಆಕೆಯೂ ನೀರುಪಾಲಾಗಿದ್ದರು.

ಇಬ್ಬರನ್ನು ಕಾಪಾಡಲು ಅಲ್ಲಿಯೇ ಇದ್ದ ಆತನ ಇಬ್ಬರು ಸ್ನೇಹಿತರಾದ ಶಂಕರ್ ಮತ್ತು ಹರ್ಷಿತ್​ ಗೋ ಕಟ್ಟೆಗೆ ಹೋಗಿದ್ದರು. ಘಟನೆಯಲ್ಲಿ ಅವರೂ ಮೃತಪಟ್ಟರು. ಮಹಾದೇವ ಎಂಬವರು ನೀರಿಗೆ ಬಿದ್ದವರನ್ನು ರಕ್ಷಿಸಲು ಧಾವಿಸಿದ್ದು, ಈಜು ಬಾರದೆ ಮುಳುಗಿ ಸಾವನ್ನಪ್ಪಿದ್ದರು. ಘಟನೆಯಲ್ಲಿ ರಂಜಿತ್ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ತಿಳಿದುಬಂದಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details