ಕರ್ನಾಟಕ

karnataka

ETV Bharat / state

ಟಾಂಗಾ ಹೋಗಿ ಟಂ ಟಂ ಬಂತು... ಮುರಾಬಟ್ಟೆಯಾದ ಜಟಕಾ ಬಂಡಿ ಬದುಕು - undefined

ಮರೆಯಾಗುತ್ತಿರುವ ಬಡವರ ಅಂಬಾರಿ. ಟಾಂಗಾ ಓಡಿಸುವ ವೃತ್ತಿಯನ್ನೇ ನಂಬಿ ಜೀವನದ ಬಂಡಿ ಸಾಗಿಸುತ್ತಿದ್ದವರ ಬದುಕು ಈಗ ಮುರಾಬಟ್ಟೆ. ಟಾಂಗಾಗಳ ಜಾಗಕ್ಕೆ ಬಂದವು ಟಂ ಟಂಗಳು.

ಜಟಕಾ ಬಂಡಿ

By

Published : Apr 25, 2019, 8:23 PM IST

ಗದಗ: ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮಾ, ಜರದಾ ಬೀಡಾ ತಿಂತಾ ಕರಗಾ ನೋಡುಮಾ...

ಮಾಲಶ್ರೀ ಅಭಿನಯದ ಗಜಪತಿ ಗರ್ವಭಂಗ ಚಿತ್ರದ ಈ ಹಾಡು ಕೇಳಿದರೆ ಗೊತ್ತಾಗತ್ತೆ ಆಗಿನ ಕಾಲದ ಉತ್ತರ ಕರ್ನಾಟಕ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಜಟಕಾ ಗಾಡಿಗಳು ಎಷ್ಟು ಉಪಯುಕ್ತವಾಗಿತ್ತು ಎಂದು. ಮೋಟಾರ್ ಸೈಕಲ್, ಟಂಟಂ, ಆಟೋರಿಕ್ಷಾ ಏನೂ ಇಲ್ದೇ ಇರೋ ಸಮಯದಲ್ಲಿ ಪ್ರಯಾಣಿಕರನ್ನ ಹೇಳಿದ ಸ್ಥಳಕ್ಕೆ ಕೈಗೆಟುಕೋ ದರದಲ್ಲಿ ಸಹ ಸುರಕ್ಷಿತವಾಗಿ ಹೊತ್ತೊಯ್ತಿದ್ದ ಅಶ್ವಮೇಧದ ಈ ಅಂಬಾರಿಗಳು ಇದೀಗ ನೆನಪು ಮಾತ್ರ.

ಉತ್ತರ ಕರ್ನಾಟಕದ ಮುದ್ರಣ ಕಾಶಿ ಗದಗ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಈ ಟಾಂಗಾ ಗಾಡಿಗಳು ಬಡವರ ಅಂಬಾರಿ ಅಂತಾನೇ ಖ್ಯಾತಿ ಪಡೆದಿದ್ದವು. ಆದರೆ ಈಗ ಕಾಲ ಬದಲಾಗಿದೆ, ಕಣ್ಮುಚ್ಚಿ ಬಿಡೋ ಅಷ್ಟರಲ್ಲಿ ತಾನು ಹೇಳಿದ ಸ್ಥಳಕ್ಕೆ ಮುಟ್ಟಬೇಕು ಎಂಬ ಪ್ರಯಾಣಿಕರ ನಿರೀಕ್ಷೆಗೂ ಮೀರಿ ಮೋಟಾರು ವಾಹನಗಳು ಬಂದಿವೆ. ಇದರಿಂದ ಕಾಲ ಕ್ರಮೇಣ ಟಾಂಗಾ ಗಾಡಿಗಳ ಬೇಡಿಕೆಯೂ ಸಹ ಕ್ಷೀಣಿಸುತ್ತಾ ಹೋಯಿತು. ಟಾಂಗಾ ಓಡಿಸುವ ವೃತ್ತಿಯನ್ನೇ ನಂಬಿ ಜೀವನದ ಬಂಡಿ ಸಾಗಿಸುತ್ತಿದ್ದ ಅದೆಷ್ಟೋ ಟಾಂಗಾ ವಾಲಾಗಳು ಈ ಕಸುಬನ್ನು ಬಿಟ್ಟು ಇದೀಗ ಬೇರೆ ದಾರಿ ಹಿಡಿದಿದ್ದಾರೆ. ತಮ್ಮ ಜೀವನ ಸರಿದೂಗಿಸೋದು ಇರಲಿ, ಇತ್ತ ಕುದುರೆಗೆ ಒಂದು ಹೊತ್ತು ಹುಲ್ಲು ಹಾಕಲಿಕ್ಕೂ ಗಳಿಕೆಯಿಲ್ಲದೆ ಇವರ ದುಡಿಮೆ ಕುಗ್ಗಿಹೋಗಿದೆ. ಹೀಗಿದ್ದರೂ ಕೆಲವೊಂದು ಕುಟುಂಬಗಳಿಗೆ ಮಾತ್ರ ಈಗಲೂ ಈ ಟಾಂಗಾ ಗಾಡಿಗಳೇ ಜೀವನಕ್ಕೆ ಆಸರೆ ಮತ್ತು ಅನಿವಾರ್ಯವಾಗಿವೆ.

ಮರೆಯಾಗುತ್ತಿರುವ ಟಾಂಗಾ ಗಾಡಿಗಳು

ಟಾಂಗಾ ಗಾಡಿಗಳನ್ನು ಬರೀ ಪ್ರಯಾಣಕ್ಕೆ ಅಷ್ಟೇ ಅಲ್ಲದೇ ಹಲವು ರೀತಿಯ ಪ್ರಚಾರಕ್ಕೂ ಸಹ ಬಳಸಲಾಗುತಿತ್ತು. ಚುನಾವಣೆ, ನಾಟಕ, ವ್ಯಾಪಾರ, ಸಿನಿಮಾ ಶೂಟಿಂಗ್, ಟೆಂಟ್ ಸಿನಿಮಾ ಹೀಗೆ ಅನೇಕ ಪ್ರಚಾರಕ್ಕೆ ಈ ಜಟಕಾ ಕುದುರೆ ಗಾಡಿನೇ ಮುಂಚೂಣಿಯಲ್ಲಿರುತ್ತಿತ್ತು. ಯಾವುದೇ ಪೆಟ್ರೋಲ್, ಡೀಸೆಲ್ ಅವಶ್ಯಕತೆಯಿಲ್ಲದೇ ಇವು ಪರಿಸರ ಸ್ನೇಹಿ ವಾಹನವಾಗಿದ್ದವು. ಕುದುರೆ ಹೊಟ್ಟೆಗೆ ಒಂದಿಷ್ಟು ಹುಲ್ಲು ಹಾಕಿದ್ರೆ ಸಾಕು ಇಡೀ ದಿನ ಜಬರ್​ದಸ್ತಾಗಿ ಓಡ್ತಾ ಇದ್ದವು.

ಆದರೆ ಈ ಟಾಂಗಾಗಳ ಜಾಗಕ್ಕೆ ಈಗ ಟಂ ಟಂಗಳು ಬಂದಿದ್ದು, ಜನ ಸಾಮಾನ್ಯರು ಇವುಗಳಲ್ಲಿ ಹೆಚ್ಚು ಪ್ರಯಾಣ ಬೆಳೆಸುತ್ತಿರುವುದರಿಂದ ಜಟಕಾ ಬಂಡಿ ಬದುಕು ಮುರಾಬಟ್ಟಿಯಾಗಿದೆ.

For All Latest Updates

TAGGED:

ABOUT THE AUTHOR

...view details