ಗದಗ:ಉತ್ತರ ಕರ್ನಾಟಕದಲ್ಲಿ ನರಗುಂದವನ್ನು ಬಂಡಾಯದ ನೆಲ ಅಂತಾನೇ ಕರಿತಾರೆ, 39 ವರ್ಷದಿಂದ ಬಂಡಾಯದ ನೆಲದ ಜನರ ಆಕ್ರೋಶದ ಕಿಚ್ಚು ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಸುಮಾರು ನಾಲ್ಕು ದಶಕದ ಹೋರಾಟ ಬರೀ ರಾಜಕೀಯ ಲಾಭಕ್ಕಾಗಿ ಮಾತ್ರ ಸೀಮಿತವಾಗಿದೆ.
ಹೌದು ನರಗುಂದ ರೈತ ಹುತಾತ್ಮ ಕಾರ್ಯಕ್ರಮದಲ್ಲಿ ಸರ್ಕಾರದ ತಾತ್ಸಾರದ ವಿರುದ್ಧ ರೈತ ಮುಖಂಡರು, ಸ್ವಾಮೀಜಿಗಳು, ಸಂಘಟನಾಕಾರರು, ಬುದ್ಧಿಜೀವಿಗಳು ಗುಡುಗಿದರು.
1980ರ ವೇಳೆ ನೀರು ಬಾರದಿದ್ದರೂ ರೈತರು ನೀರಿ ಕರ, ಭೂ ಕರ ಕಟ್ಟಬೇಕಾಗಿರುವುದನ್ನ ವಿರೋಧಿಸಿದರು. ಅಂದಿನ ಹೋರಾಟದಲ್ಲಿ ಅಂದ್ರೆ, 1980ರ ಜುಲೈ 21 ರಂದು ನಡೆದ ಗೋಲಿಬಾರ್‌ನಲ್ಲಿ ನರಗುಂದದ ಈರಪ್ಪ ಕಡ್ಲಿಕೊಪ್ಪ ಹಾಗೂ ನವಲಗುಂದ ಬಸಪ್ಪ ಲಕ್ಕುಂಡಿ ಎಂಬ ಅನ್ನದಾತರು ಹುತಾತ್ಮರಾಗಿದ್ರು. ಅವರ ನೆನಪಿಗಾಗಿ ಇಂದು ರೈತ ಹುತಾತ್ಮ ದಿನಾಚರಣೆ ಆಚರಿಸಲಾಗ್ತಿದೆ. ಅಂದಿನಿಂದ ಇಂದಿಗೂ ಮಹಾದಾಯಿ, ಕಳಸಾ ಬಂಡೂರಿ ನೀರಿನ ಸಮಸ್ಯೆ ಸಮಸ್ಯೆ ಆಗಿಯೇ ಉಳಿದಿದೆ. 2018 ಅಗಸ್ಟ್ 14ರಂದು ನ್ಯಾಯಾಧೀಕರಣ ಕೊಟ್ಟ ತೀರ್ಪಿನ ಪ್ರಕಾರವಾದ್ರೂ ನೀರುಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಅಂತಿದ್ದಾರೆ ರೈತ ಹೋರಾಟಗಾರರು.
ಬಂಡಾಯದ ನೆಲದಲ್ಲಿ ಇಂದು 39ನೇ ರೈತ ಹುತಾತ್ಮ ದಿನಾಚರಣೆ ಇಂದು ರೈತ ಹುತಾತ್ಮ ದಿನವನ್ನ ಕರಾಳ ದಿನವನ್ನಾಗಿ ಆಚರಿಸಿ ಸರ್ಕಾರಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ವೀರೇಶ ಸೊಬರದಮಠ ನೇತೃತ್ವದ ರಾಜ್ಯ ರೈತಸೇನೆ ಹಾಗೂ ಬಸವರಾಜ ಅಂಬಲಿ ನೇತೃತ್ವದ ಮಹಾದಾಯಿಗಾಗಿ ಮಹಾವೇದಿಕೆಯಿಂದ ಸಮಾವೇಶ ನಡೆಸಿದ್ರು. ಅನೇಕರು ಹುತಾತ್ಮ ರೈತ ಈರಪ್ಪ ಕಡ್ಲಿಕೊಪ್ಪ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಇನ್ನು ಮಾಜಿ ಶಾಸಕ ಬಿ.ಆರ್ ಯಾವಗಲ್ ತಮ್ಮ ಬೆಂಬಲಿಗರೊಂದಿಗೆ ಬಂದು ರೈತ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ್ರು. ಇನ್ನು ರೈತ ಮುಖಂಡರು, ಸ್ವಾಮೀಜಿಗಳು, ಸಂಘಟನಾಕಾರರು ಸೇರಿದಂತೆ ಅನೇಕರು ಹೋರಾಟ ಮಾಡಿದರು. ಇದುವರೆಗೂ ಈ ನೆಲದಲ್ಲಿ ನೀರು ಹರಿಯುತ್ತಿಲ್ಲ.
ಇಂದಿನ ರೈತ ಹುತಾತ್ಮ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯ ಹಲವಾರು ಗ್ರಾಮಗಳಿಂದ ತಂಡೋಪತಂಡವಾಗಿ ರೈತರು ಆಗಮಿಸಿದ್ರು. ಒಟ್ಟಿನಲ್ಲಿ ಈಗಲಾದ್ರೂ ಸರ್ಕಾರಗಳು ಎಚ್ಚೆತ್ತು ಮಹಾದಾಯಿ, ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸೋ ಮೂಲಕ ಹುತಾತ್ಮ ರೈತರ ಆತ್ಮಕ್ಕೆ ನ್ಯಾಯ ಸಿಗುವಂತೆ ಮಾಡುತ್ತಾ ಕಾದು ನೋಡಬೇಕಾಗಿದೆ.