ಗದಗ:ಜಿಲ್ಲೆಯ ರೋಣ ತಾಲೂಕಿನ ಕೊಟುಮುಚಗಿ ಗ್ರಾಮದ ರೈತ ವಿರೇಶ ಶಂಕರಪ್ಪ ನೇಗಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿದ್ದಾರೆ. ಇವರು ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ, ಅದರಿಂದ ತಮ್ಮ ಮನೆಯಲ್ಲಿ ಕೈತೋಟ ನಿರ್ಮಾಣ ಮಾಡಿದ್ದಾರೆ.
ಕಿರಾಣಿ ಅಂಗಡಿಗಳಲ್ಲಿ ಖಾಲಿಯಾದ ಪಾನ್ ಮಸಾಲ, ಗುಟ್ಕಾ ಮತ್ತಿತರ ವಸ್ತುಗಳ ಪ್ಲಾಸ್ಟಿಕ್ ಚೀಲ, ಪೊಟ್ಟಣ ಸೇರಿದಂತೆ ಜನರು ಬಳಸಿ ಎಸೆಯೋ ತಂಪು ಪಾನೀಯಗಳ ಬಾಟಲಿಗಳನ್ನು ಹುಡುಕಿ ತರೋ ಇವರು ಅವುಗಳನ್ನೇ ಮರುಬಳಕೆ ಮಾಡಿ ಪರಿಸರ ಸ್ನೇಹಿ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ವಿರೇಶ ಅವರು ಸ್ವಂತ ಆರು ಎಕರೆ ಜಮೀನು ಹೊಂದಿದ್ದು ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ ಈ ವಿಶಿಷ್ಠ ಜಾಗೃತಿ ಮೂಡಿಸ್ತಿದಾರೆ.
ಇನ್ನು ಕೊಟುಮುಚಗಿ ಗ್ರಾಮ ಹಾಗೂ ಪಕ್ಕದ ನರೇಗಲ್ ಪಟ್ಟಣದಲ್ಲಿ ಇರುವ ಎಲ್ಲಾ ಕಿರಾಣಿ ಅಂಗಡಿ, ತಂಪು ಪಾನೀಯ ಮಾಲೀಕರಿಗೆ ಮನವಿ ಮಾಡಿಕೊಳ್ಳುವ ರೈತ, ಅವರ ಅಂಗಡಿಗಳ ಮುಂದೆ ಒಂದೊಂದು ಖಾಲಿ ಚೀಲ ಇಟ್ಟು ಬಂದಿರುತ್ತಾರೆ. ಅಂಗಡಿ ಮಾಲೀಕರಿಗೆ ನಿಮ್ಮಲ್ಲಿರುವ ಖಾಲಿ ಬಾಟಲಿಗಳಾಗಲಿ ಅಥವಾ ಪ್ಲಾಸ್ಟಿಕ್ ಚೀಲಗಳನ್ನಾಗಲಿ ಎಲ್ಲೆಂದರಲ್ಲಿ ಎಸೆಯದೇ ಈ ಡಬ್ಬದಲ್ಲಿ ಹಾಕಿರಿ ಎಂದು ಮನವಿ ಮಾಡಿ ಬರುತ್ತಾರೆ. ಆ ಪ್ರಕಾರ ಮಾಲೀಕರು ಬಳಕೆಯಾದ ಪ್ಲಾಸ್ಟಿಕ್ ವಸ್ತುಗಳನ್ನು ಅದರಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ.
ತದನಂತರದ ಆ ಎಲ್ಲ ಚೀಲಗಳನ್ನು ಸಂಗ್ರಹಿಸಿ ತಮ್ಮ ಮನೆಗೆ ತಂದು, ಚೀಲಗಳಲ್ಲಿ ಮಣ್ಣಿನ ಜೊತೆಗೆ ಸಾವಯವ ಗೊಬ್ಬರವನ್ನ ಹಾಕುವ ಮೂಲಕ ಹಲವು ತರಹದ ಕಾಯಿಪಲ್ಯ ಗಿಡಗಳನ್ನು ಬೆಳೆಯುತ್ತಿದ್ದಾರೆ.
ಇನ್ನು ಅದೇ ಪ್ಲಾಸ್ಟಿಕ್ ಬಾಟಲಿಗಳ ಮೂಲಕ ಸಸಿಗಳಿಗೆ ಹನಿ ನೀರಾವರಿ ಪದ್ಧತಿಯನ್ನೂ ಸಹ ಅಳವಡಿಸಿಕೊಂಡಿದ್ದಾರೆ. ಈ ರೀತಿ ಪ್ಲಾಸ್ಟಿಕ್ ಚೀಲದಲ್ಲಿ ಬೆಳೆದು ನಿಂತಿರುವ ಸಸಿಗಳನ್ನು ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ರೈತ ವಿರೇಶ ಪರಿಸರ ಕುರಿತು ವಿಶಿಷ್ಟವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.