ಯಶ್ ಕಟೌಟ್ ನಿಲ್ಲಿಸುತ್ತಿದ್ದಾಗ ದುರಂತ ಗದಗ:ನಟ ಯಶ್‌ಹುಟ್ಟುಹಬ್ಬದ ಕಟೌಟ್ ನಿಲ್ಲಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ. ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಮೃತರು ಎಂದು ಗುರುತಿಸಲಾಗಿದೆ.
ಸೂರಣಗಿ ಗ್ರಾಮದ ನಿವಾಸಿಗಳಾದ ಯುವಕರು ಬರ್ತ್‌ಡೇ ಕಟೌಟ್ ಕಟ್ಟಲು ಮುಂದಾಗಿದ್ದರು. ಕಟೌಟ್ ಅನ್ನು ಎತ್ತುತ್ತಿದ್ದಾಗ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದೆ. ಈ ವೇಳೆ ಅಲ್ಲೇ ನಿಂತುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ ಹರಿಜನ ಹಾಗೂ ಪ್ರಕಾಶ ಮ್ಯಾಗೇರಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರು ಕಣ್ಣೀರಿಡುತ್ತಿದ್ದಾರೆ.
"ಯಶ್ ಬರ್ತ್‌ಡೇಗಾಗಿ ಬ್ಯಾನರ್ ಮಾಡಿಸಿದ್ದೆವು. ಅದನ್ನು ನಿಲ್ಲಿಸುವಾಗ ಮೇಲಿದ್ದ ವಿದ್ಯುತ್ ತಂತಿಗೆ ತಗುಲಿದೆ. ಎಂಟು ಜನ ಸೇರಿಕೊಂಡು ಬ್ಯಾನರ್ ನಿಲ್ಲಿಸುತ್ತಿದ್ದೆವು. ಆಗ ಏಕಾಏಕಿ ಘಟನೆ ಸಂಭವಿಸಿತು. ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದೆವು" ಎಂದು ಸ್ಥಳದಲ್ಲಿದ್ದ ಯುವಕ ಸುಬ್ರಹ್ಮಣ್ಯ ಸೂರಣಗಿ ಹೇಳಿದರು.
ಆಸ್ಪತ್ರೆಗೆ ಶಾಸಕರ ಭೇಟಿ:ಲಕ್ಷ್ಮೇಶ್ವರ ಆಸ್ಪತ್ರೆಗೆ ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಭೇಟಿ ನೀಡಿ, ಮಾಹಿತಿ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತ ಯುವಕರ ನಿವಾಸಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಕೂಡ ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಸಾಮೂಹಿಕ ಅಂತ್ಯಕ್ರಿಯೆ:ಮೂವರು ಯುವಕರ ಮೃತದೇಹಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಬಳಿಕ ಸೂರಣಗಿ ರುದ್ರಭೂಮಿಯಲ್ಲಿ ಏಕಕಾಲಕ್ಕೆ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಗ್ನಿ ಸ್ಪರ್ಶ ಮೂಲಕ ಅಂತ್ಯಸಂಸ್ಕಾರ ಮಾಡಿದ್ದು, ಸ್ಥಳದಲ್ಲಿ ಸಂಬಂಧಿಕರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಎಸ್ಪಿ ಪ್ರತಿಕ್ರಿಯೆ:ಚಿತ್ರನಟ ಯಶ್ ಅವರ ಹುಟ್ಟುಹಬ್ಬ ಹಿನ್ನೆಲೆ ಗ್ರಾಮದಲ್ಲಿ ರಾತ್ರಿ ವೇಳೆ ಅವರ ಬ್ಯಾನರ್ ಹಾಕಲಾಗುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಮೆಟಲ್ ಫ್ರೇಮ್ ಇದ್ದುದರಿಂದ ಕಟೌಟ್ಗೆ ವಿದ್ಯುತ್ ತಂತಿ ತಗುಲಿ ಈ ದುರಂತ ಸಂಭವಿಸಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ. ಸಂಬಂಧಪಟ್ಟ ತಜ್ಞರ ಅಭಿಪ್ರಾಯ ಪಡೆದುಕೊಂಡು ಘಟನೆ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗಂಡನ ಜೊತೆ ಸೇರಿ ಹೆತ್ತ ತಾಯಿಯನ್ನೇ ಕೊಂದಿದ್ದ ಮಗಳು: ಮಂಡ್ಯದಲ್ಲಿ ವರ್ಷದ ಬಳಿಕ ಕೊಲೆ ಕೇಸ್ ಬಯಲು