ಗದಗ:ಕೊರೊನಾದಿಂದ ಮುಕ್ತಿ ಹೊಂದಿದ್ದ ಜಿಲ್ಲೆಗೆ ಈಗ ತಬ್ಲಿಘಿಗಳಿಂದಲೇ ಮತ್ತೆ ಕಂಟಕ ಶುರುವಾಗಿದೆ. ಕೊರೊನಾ ಹಾವಳಿಯಿಂದ ಮುಕ್ತಿ ಸಿಕ್ಕಿತು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಮೂರು ಪಾಸಿಟಿವ್ ಕೇಸ್ ದೃಢಪಟ್ಟಿವೆ.
ಕಳೆದ ಎರಡು ದಿನಗಳ ಹಿಂದೆ 16 ಮಂದಿ ತಬ್ಲಿಘಿಗಳು ಜಿಲ್ಲೆಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
36 ವರ್ಷದ ಪಿ-905, 61 ವರ್ಷದ ಪಿ-912, ಹಾಗೂ 65 ವರ್ಷದ ಪಿ-913 ರೋಗಿಗಳಿಗೆ ವೈರಸ್ ದೃಢಪಟ್ಟಿದೆ. ಜಿಲ್ಲೆಯ ನರಗುಂದ ಮೂಲದ ಪಿ-905 ಗುಜರಾತ್‌ನ ಅಹ್ಮದಾಬಾದ್‌ನಿಂದ ಗದುಗಿಗೆ ಬಂದಕೂಡಲೆ ಕ್ವಾರಂಟೈನ್ ಮಾಡಲಾಗಿದೆ.
ಪಿ-912 ಹಾಗೂ ಪಿ-913 ಗದಗ ನಗರದ ಗಂಜಿಬಸವೇಶ್ವರ ಸರ್ಕಲ್ ಪ್ರದೇಶದ ನಿವಾಸಿಗಳು. ಈ ಇಬ್ಬರು ಸೋಂಕಿತರು ಈ ಹಿಂದೆ ಇದೇ ಕಾಲೋನಿಯ ಕೊರೊನಾ ಸೋಂಕು ತಗುಲಿ, ಗುಣಮುಖರಾಗಿ ಬಿಡುಗಡೆಯಾದ ಪಿ-514 ರ ದ್ವಿತೀಯ ಸಂಪರ್ಕದಲ್ಲಿ ಇದ್ದರು ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಮಾಹಿತಿ ನೀಡಿದ್ದಾರೆ.
ಅಣ್ಣನಿಂದ ಈಗ ತಮ್ಮನಿಗೆ ಸೋಂಕು ಕಾಣಿಸಿಕೊಂಡಿದೆ. ಅಂದ್ರೆ ಈಗಾಗಲೆ ಸೋಂಕಿನಿಂದ ಗುಣಮುಖರಾದ ಪಿ-514ರ ಸಹೋದರನಾದ 65 ವರ್ಷದ ಪಿ-913 ವೃದ್ದರಿಗೆ ಈಗ ಪಾಸಿಟಿವ್ ಕಾಣಿಸಿಕೊಂಡಿದ್ದು ಸೋಂಕಿತ ಇಬ್ಬರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲದಂತಾಗಿದೆ. ಪಿ-912ರ ಪ್ರಥಮ ಸಂಪರ್ಕದಲ್ಲಿದ್ದ ಇಬ್ಬರು, ದ್ವಿತೀಯ ಸಂಪರ್ಕದ 25 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಅದೇ ರೀತಿ ಪಿ-913 ಪ್ರಥಮ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಹತ್ತಕ್ಕೂ ಹೆಚ್ಚು ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಮೊದಲು ಗದಗನಲ್ಲಿ ಒಟ್ಟು 5 ಪ್ರಕರಣಗಳು ದೃಢಪಟ್ಟಿದ್ದವು. ಅದರಲ್ಲಿ 80 ವರ್ಷದ ವೃದ್ಧೆ ಸಾವನಪ್ಪಿದ್ದು, 4 ಜನ ಗುಣಮುಖರಾಗಿದ್ದರು. ಈ ನಡುವೆ ಕೊರೊನಾ ಮುಕ್ತವಾಗಿದ್ದ ಜಿಲ್ಲೆಯಲ್ಲಿ ಮತ್ತೆ ಈ ಮೂರು ಕೇಸ್ ವಕ್ಕರಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಗುಜರಾತ್‌ನಿಂದ ಬಂದ 16 ಜನ ತಬ್ಲಿಘಿಗಳಲ್ಲಿ ಈಗ ಒಬ್ಬನಿಗೆ ಪಾಸಿಟಿವ್ ಕಾಣಿಸಿಕೊಂಡಿದ್ದು, ಇನ್ನು ಎಷ್ಟು ಜನರ ಮೇಲೆ ಇದರ ವಕ್ರ ದೃಷ್ಟಿ ಬಿಳ್ಳುತ್ತದೆಯೋ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ.