ಗದಗ:ಪರೀಕ್ಷಾ ಕೇಂದ್ರ ಇರುವ ಮುನ್ಸಿಪಲ್ ಕಾಲೇಜು ಬಳಿ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆ ಆರಂಭಕ್ಕೂ ಮುನ್ನ ಕೆಲವೊಂದು ಎಡವಟ್ಟುಗಳು ನಡೆದವು.
ಶಾಲಾ ಆವರಣದಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು. ಹುಡುಗಿಯರನ್ನು ನೋಡಲು, ಮಾತನಾಡಿಸಲು ಬರುವ ಪೋಲಿಗಳ ಹಾವಳಿಯೂ ಹೆಚ್ಚಾಗಿದ್ದು ಕಂಡು ಬಂತು. ಪಾಲಕರು, ವಿದ್ಯಾರ್ಥಿಗಳು ಗುಂಪು ಗುಂಪಾಗಿ ಸೇರಿದ್ದರು. ಇಲ್ಲಿ ಹೇಳೋರು ಕೇಳುವವರು ಯಾರು ಇಲ್ಲದಂತಾಗಿತ್ತು.
ಕ್ಯಾಮರಾ ಕಂಡ ಕೂಡಲೇ ಪಾಲಕರು ಹಾಗೂ ಪೋಲಿಗಳನ್ನು ಪೊಲೀಸರು ಓಡಿಸಿದರು. ಕ್ರಿಕೆಟ್ ಆಟಗಾರರನ್ನು ಹೊರ ಹಾಕಿದರು. ಅಷ್ಟೇ ಅಲ್ಲ, ಪರೀಕ್ಷಾ ಕೇಂದ್ರ ಗುಟ್ಕಾ, ಪಾನ್ ಪರಾಗ್ ಉಗುಳುವ ಸ್ಥಳವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅವ್ಯವಸ್ಥೆ ಆಗರವಾಗಿದೆ. ಎಲ್ಲಂದರಲ್ಲಿ ಗಲೀಜೋ ಗಲೀಜು ಎಂದು ಮಕ್ಕಳ ಪೋಷಕರು ಆರೋಪಿಸಿದರು.
ದುರುಳರು ಉಗುಳಿದ ಗೋಡೆಗೆ ಸುಣ್ಣ, ಬಣ್ಣ ಹಚ್ಚುವ ಗೋಜಿಗೂ ಹೋಗದಿರುವುದಕ್ಕೆ ಆಡಳಿತ ಮಂಡಳಿಯ ವಿರುದ್ಧ ಪರೀಕ್ಷಾ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ ಕಿಡಿಕಾರಿದರು.