ಗದಗ: ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳು ನಮಗೆ ಮಹತ್ವದ್ದು. ನಮ್ಮ ಅಭ್ಯರ್ಥಿಯನ್ನು ಕಡೆಗಣಿಸುವ ಮಾತೇ ಇಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಗದಗ ಮತಕ್ಷೇತ್ರದಲ್ಲಿ ಸ್ಟಾರ್ ಕ್ಯಾಂಪೇನರ್ ಬರುತ್ತಿಲ್ಲ, ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಯಾರು ಅಷ್ಟು ಸರಿಯಾಗಿ ಪ್ರಚಾರ ಮಾಡುತ್ತಿಲ್ಲ ಎಂಬ ಆರೋಪಕ್ಕೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಆ ರೀತಿ ಆಗಲ್ಲ. ನಾನು ಮತ್ತೆ ನಾಳೆ ವಾಪಸ್ ಗದಗ ನಗರಕ್ಕೆ ಬಂದು ಪ್ರಚಾರ ಮಾಡ್ತೇನೆ. ಗದಗ A+ ಇರುವಂತಹ ವಿಧಾನಸಭಾ ಕ್ಷೇತ್ರ. ನಾಳೆ ಸಂಜೆ 7 ಗಂಟೆಗೆ ಬಂದು ರೋಡ್ ಶೋ ಮಾಡುವೆ. ಕಾರ್ಯಕರ್ತರನ್ನು ಕೂಡಿಸಿ ಸಭೆ ಕೂಡ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ಪ್ರಣಾಳಿಕೆ ಕಟ್ & ಪೇಸ್ಟ್ ಎಂಬ ಕೈ ನಾಯಕ ಎಚ್ ಕೆ ಪಾಟೀಲ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಟ್ & ಪೇಸ್ಟ್ ಅವರು ಮಾಡ್ತಾ ಬಂದಿದ್ದಾರೆ. ನಮ್ಮ ಪ್ರಣಾಳಿಕೆ ಅವರಿಗೆ ಸಂಬಂಧ ಇಲ್ಲ. ಗಣೇಶ ಚತುರ್ಥಿ, ವಿಜಯದಶಮಿ, ದೀಪಾವಳಿಗೆ ಮೂರು ಗ್ಯಾಸ್ ಸಿಲಿಂಡರ್ ನೀಡುತ್ತಿರುವುದು ಕಟ್ & ಪೇಸ್ಟ್ ಅಲ್ಲ. ಅರೋಗ್ಯ ದೃಷ್ಟಿಯಿಂದ 5 ಕೆಜಿ ಅಕ್ಕಿ, 5 ಕೆಜಿ ಸಿರಿಧಾನ್ಯ ಘೋಷಣೆ ಮಾಡಿದ್ದೇವೆ. ನಮ್ಮ ಸಿದ್ದರಾಮಯ್ಯ 10 ಕೆಜಿ ಅಂತಾ ಹೇಳ್ತಾರೆ. ಆರೋಪ ಮಾಡುವುದೇ ಅವರ ಕೆಲಸ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದರು.
ಪ್ರಧಾನಮಂತ್ರಿಗಳು 2 ವರ್ಷದಿಂದ 80 ಕೋಟಿ ಜನರಿಗೆ ಉಚಿತ ಅಕ್ಕಿ ಕೊಡುತ್ತಿದ್ದಾರೆ. ಅತಿಶಯೋಕ್ತಿ ಆಗೋ ಯಾವುದೇ ಪ್ರಣಾಳಿಕೆ ನಾವು ಹೇಳಿಲ್ಲ. ಬೆಂಗಳೂರು ಮಹಾನಗರ ಬಿಟ್ಟು ಉಳಿದ ಕಡೆ ನಾವು ಉದ್ಯೋಗ ಸೃಷ್ಟಿ ಮಾಡುವ ಆಲೋಚನೆ ಇದೆ. ಸುಮ್ಮ ಸುಮ್ಮನೆ ವಿದ್ಯುತ್ ಉಚಿತ, ಮಹಿಳೆಯರಿಗೆ ಬಸ್ ಉಚಿತ ಅಂತೆಲ್ಲ ಹೇಳಿಲ್ಲ. ಈ ರೀತಿಯ ಜನಪ್ರಿಯ ಕಾರ್ಯಕ್ರಮದಿಂದ ರಾಜ್ಯ ಸರಕಾರ ದಿವಾಳಿ ಆಗುತ್ತೆ. ಜನರಿಗೆ ಬೇಕಾಗಿರುವುದು ಉದ್ಯೋಗ, ನೀರಾವರಿ ಸೌಕರ್ಯ ಹಾಗೂ ಇತರೆ ಮೂಲಭೂತ ಬೇಡಿಕೆಗಳು.