ಗದಗ :ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರಿಗೆ ಹಲ್ಲೆಯೇ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ನಗರದಲ್ಲಿ ನಡೆದಿದೆ. ಈ ಘಟನೆ ಕುರಿತು ಮಾತನಾಡಿದ ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಬಿ ಎಸ್ ನೇಮಗೌಡ ಅವರು, ಈ ಹಿಂದೆ ಹಲವಾರು ಪ್ರಕರಣದಲ್ಲಿ ಸಿಲುಕಿ ಜಿಲ್ಲೆಯಿಂದ ಗಡಿಪಾರು ಆಗಿದ್ದ ಆರೋಪಿ ಅಬ್ದುಲ್ ರಜಾಕ್ ಆಡೂರ ಮರಳಿ ಮನೆಗೆ ಬಂಧಿಸಲು ನಮ್ಮ ತಂಡ ಆಗಮಿಸಿತ್ತು. ಆತನ ಮೇಲೆ ದೂರು ದಾಖಲು ಆಗಿದ್ದರಿಂದ ಗೂಂಡಾ ಕಾಯ್ದೆಯಡಿ ಆತನನ್ನು ಬಂಧಿಸುವಂತೆ ಜಿಲ್ಲಾಧಿಕಾರಿಗಳು ಜ.31 ರಂದು ಆದೇಶ ನೀಡಿದ್ದರು. ಇವರ ಆದೇಶದ ಮೇರೆಗೆ ಆತನನ್ನು ಬಂಧಿಸಲು ಎಸ್‌ಐ ಡಿ. ಪ್ರಕಾಶ್ ನೇತೃತ್ವದಲ್ಲಿನ ತಂಡ ಲಕ್ಷ್ಮೇಶ್ವರಕ್ಕೆ ತೆರಳಿತ್ತು.
ಈ ವೇಳೆ ತನ್ನನ್ನು ಬಂಧಿಸಲಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಆರೋಪಿ ಸೇರಿದಂತೆ ಅವನ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದು ಹಾಗೂ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸಿ ಪರಾರಿಯಾಗಿದ್ಧಾರೆ. ಈ ಘಟನೆ ಸೋಮವಾರ ರಾತ್ರಿ ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿಗೆ ನಡೆದಿದೆ. ಈ ಬಗ್ಗೆ ಯಾರ ಉಆರು ಹಲ್ಲೆ ನಡೆಸಿದರು ಮತ್ತು ಆರೋಪಿ ಪರಾರಿಯಾಗಲು ಸಹಾಯ ಮಾಡಿದವರ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿ ಕೊಂಡು ತನಿಖೆ ಶುರು ಮಾಡಿದ್ದೇವೆ ಎಂದು ಎಸ್ಪಿ ಬಿ ಎಸ್ ನೇಮಗೌಡ ಅವರು ಹೇಳಿದರು.
ಗಡಿಪಾರು ಅವಧಿ ಮುಗಿದಿದ್ದರಿಂದ ಆರೋಪಿ ಅಬ್ದುಲ್ ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿಯೇ ವಾಸವಾಗಿದ್ದ. ಈ ಮುನ್ನ ಅವನ ಮೇಲೆ 12ಕ್ಕೂ ಅಧಿಕ ಪ್ರಕರಣ ಇರುವ ಹಿನ್ನೆಲೆಯಲ್ಲಿ ಪೊಲೀಸರ ವರದಿ ಮೇರೆಗೆ ಗದಗ ಜಿಲ್ಲಾಧಿಕಾರಿಗಳು ಗೂಂಡಾ ಕಾಯ್ದೆಯಡಿ ಆತನನ್ನು ಬಂಧಿಸುವಂತೆ ಆದೇಶ ಹೊರಡಿಸಿದ್ದರು.