ಗದಗ:ಗದಗ - ಬೆಟಗೇರಿ ಅವಳಿ ನಗರವನ್ನು ಬೆಚ್ಚಿ ಬೀಳಿಸಿದ್ದ ವೃದ್ಧೆಯ ಕೊಲೆ ಪ್ರಕರಣವನ್ನು ಪೊಲೀಸರು ಐದು ದಿನಗಳಲ್ಲೇ ಭೇದಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜೈಲ್ ರೋಡ್ ನಿವಾಸಿ ಧನುಷ್ (22) ಹಾಗೂ ವಿನಯ್ ಬಂಧಿತರು. ಗದಗ ನಗರದ ಕೆ.ಸಿ.ರೋಡ್ ನಿವಾಸಿಯಾದ ಪುಷ್ಪಾ (65) ನ.11ರಂದು ಕೊಲೆಯಾಗಿದ್ದರು. ಆರೋಪಿ ಧನುಷ್, ಪುಷ್ಪಾ ಅವರ ತಂಗಿಯ ಮಗ ಎಂದು ತಿಳಿದುಬಂದಿದ್ದು ಈತನೇ ಪ್ರಮುಖ ಆರೋಪಿಯಾಗಿದ್ದಾನೆ.
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಬಂಧನ ನವೆಂಬರ 10ರಂದು ಸ್ನೇಹಿತನ ಜತೆಗೆ ಶಿವಮೊಗ್ಗದಿಂದ ಗದಗಕ್ಕೆ ಬಂದಿದ್ದ ಧನುಷ್ ಆ ದಿನ ರಾತ್ರಿ ದೊಡ್ಡಮ್ಮನ ಮನೆಯಲ್ಲೇ ಉಳಿದುಕೊಂಡಿದ್ದ. ನ.11ರ ಬೆಳಗ್ಗೆ ದೊಡ್ಡಮ್ಮನ ಮನೆಯಲ್ಲೇ ಇಬ್ಬರೂ ತಿಂಡಿ ತಿಂದಿದ್ದಾರೆ. ಬಳಿಕ ದೊಡ್ಡಮ್ಮ ಪುಷ್ಪಾ ಅವರು ಧನುಷ್‌ಗೆ ಬುದ್ಧವಾದ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮೊದಲೇ ಉಡಾಳನಾಗಿ ಅಡ್ಡದಾರಿ ಹಿಡಿದಿದ್ದ ಧನುಷ್‌ಗೆ ದೊಡ್ಡಮ್ಮನ ಮಾತು ಬುದ್ಧಿವಾದ ಅನ್ನೋದಕ್ಕಿಂತ ಆತನ ಕ್ರೂರತನಕ್ಕೆ ಕಾರಣವಾಗಿದೆ. ಸಿಟ್ಟಿಗೆದ್ದ ಆರೋಪಿಗಳು ಪುಷ್ಪಾ ಅವರ ತಲೆಯ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿದ್ದಾರೆ. ಕತ್ತಿಯಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಪುಷ್ಪಾ ಅವರ ಮೈಮೇಲಿದ್ದ ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾಗಿ ಪೊಲೀಸರ ಮುಂದೆ ಕಿರಾತಕರು ಬಾಯ್ಬಿಟ್ಟಿದ್ದಾರೆ.
ಕೆಲಸಕ್ಕೆ ಹೋಗದೆ ತಿರುಗಾಡಿಕೊಂಡಿದ್ದ ಧನುಷ್‌ಗೆ ದೊಡ್ಡಮ್ಮ ಪುಷ್ಪಾ ಅವರು ಆಗಾಗ ಬುದ್ಧಿ ಹೇಳುತ್ತಿದ್ದುದೇ ಕೊಲೆಗೆ ಕಾರಣವಾಗಿದೆ. ‘ಪುಷ್ಪಾ ಅವರು ಶಿವಮೊಗ್ಗ ದಲ್ಲಿರುವ ತಂಗಿಗೆ ಆಗಾಗ ಕರೆಮಾಡಿ, ಮಗನಿಗೆ ಸರಿಯಾಗಿ ಬುದ್ಧಿ ಹೇಳು. ಸುಮ್ಮನೆ ತಿರುಗಾಡಿಕೊಂಡು ಇದ್ದರೆ ಭವಿಷ್ಯದ ಗತಿ ಏನು? ಎಂದು ತಿಳಿಹೇಳುತ್ತಿದ್ದರು. ಆಗ ಧನುಷ್ ತಾಯಿ ಮಗನಿಗೆ ಕೆಲಸಕ್ಕೆ ಸೇರು ಎಂದು ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ತಾಯಿ ಮತ್ತು ಧನುಷ್ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಧನುಷ್ ಇಷ್ಟಕ್ಕೆಲ್ಲಾ ಕಾರಣ ದೊಡ್ಡಮ್ಮನೇ ಎಂದು ನ.11ರಂದು ಸ್ನೇಹಿತನ ಜತೆಗೂಡಿ ಪುಷ್ಪಾ ಅವರನ್ನು ಕೊಂದಿದ್ದಾನೆ.
ಸುಳಿವು ಸಿಗದಂತೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬೆಟಗೇರಿ ಬಡಾವಣೆ ಸಿಪಿಐ ಭೀಮನಗೌಡ ಎ.ಬಿರಾದಾರ, ಎಸ್‌ಐ ಎಂ.ಜಿ.ನಾಯಕ, ಎಎಸ್‌ಐ ಆರ್.ಜಿ.ಬೇವಿನಕಟ್ಟಿ ಹಾಗೂ ಸಿಬ್ಬಂದಿ ಸೇರಿ ಚಾಕಚಕ್ಯತೆಯಿಂದ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲಾ ಪೊಲೀಸರಿಗೆ ಎಸ್‌ಪಿ ಅವರು ಪ್ರಶಂಸಾ ಪತ್ರ ನೀಡಿ, ಬಹುಮಾನ ಘೋಷಿಸಿದ್ದಾರೆ.