ಗದಗ : ಜಿಲ್ಲೆಯಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಕಪ್ಪತಗುಡ್ಡದ ಅಂಚಿನಲ್ಲಿರುವ ಹೊಲ-ಗದ್ದೆಗಳ ರೈತರು ಹಂದಿಗಳ ಕಾಟದಿಂದ ಬೇಸತ್ತು ಹೋಗಿದ್ದಾರೆ. ಹೊಲ, ಗದ್ದೆಗಳಿಗೆ ನಿತ್ಯ ಹಂದಿಗಳು ಲಗ್ಗೆಯಿಟ್ಟು ಬೆಳೆ ನಾಶ ಮಾಡುವುದು ಇಲ್ಲಿ ಮಾಮೂಲಾಗಿದೆ. ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೋವನಾಳ ಗ್ರಾಮದಲ್ಲಿ ಎರಡು ಎಕರೆ ಮೆಕ್ಕೆಜೋಳ ಹಂದಿಗಳ ಹಾವಳಿಗೆ ತುತ್ತಾಗಿದೆ.
ರೈತ ಚಂದ್ರಗೌಡ ಕರೆಗೌಡ್ರ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 2 ಎಕರೆ ಮೆಕ್ಕೆಜೋಳವನ್ನು ಹಂದಿಗಳು ನಾಶಪಡಿಸಿವೆ. ಬಿತ್ತನೆ ಮಾಡಿದಾಗಿನಿಂದ ಮಳೆ ಕೊರತೆ, ಅತಿವೃಷ್ಟಿ, ಕೀಟಬಾಧೆ, ಇಳುವರಿ ಕುಂಠಿತ ಹೀಗೆ ಹಲವಾರು ಸವಾಲುಗಳ ಮಧ್ಯೆ ಬೆಳೆದು ನಿಂತಿದ್ದ ಬೆಳೆ ಈಗ ಹಂದಿಗಳ ಪಾಲಾಗಿದೆ.