ಗದಗ: ನಗರದಲ್ಲಿ ನೆತ್ತರು ಹರಿದಿದೆ. ಹಣ್ಣಿನ ವ್ಯಾಪಾರಿಯೋರ್ವನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದ ತೀಸ್ ಬಿಲ್ಡಿಂಗ್ ಬಳಿ ಭಾನುವಾರ ರಾತ್ರಿ ನಡೆದಿದೆ.
ಬ್ಯಾಂಕ್ ರಸ್ತೆಯ ಅಯೋಧ್ಯಾ ಹೋಟೆಲ್ ಬಳಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ವಿವೇಕಾನಂದ ರಸ್ತೆಯ ನಿವಾಸಿ ಗುಂಡಪ್ಪ ಚಲವಾದಿ ಅಲಿಯಾಸ್ ಮುತ್ತು ಚಲವಾದಿ (28) ಕೊಲೆಗೀಡಾದ ಯುವಕ. ಹರಿತವಾದ ಚಾಕುವಿನಿಂದ ಯುವಕನಿಗೆ ಇರಿಯಲಾಗಿದೆ. ಕತ್ತು, ತಲೆ, ಎದೆ ಹಾಗೂ ಹೊಟ್ಟೆಯ ಬಾಗಕ್ಕೆ ಹಲವು ಬಾರಿ ಇರಿದಿದ್ದರಿಂದ ಕರುಳು ಹೊರಬಿದ್ದಿದ್ದು, ಕೊಲೆಗಡುಕರ ರಾಕ್ಷಸ ಕೃತ್ಯಕ್ಕೆ ಸಾಕ್ಷಿಯಾಗಿದೆ.
ಇದನ್ನೂ ಓದಿ:ಮುಂಡಗೋಡದಲ್ಲಿ ಹರಿದ ನೆತ್ತರು.. ಚಾಕುವಿನಿಂದ ವ್ಯಕ್ತಿಯ ಕುತ್ತಿಗೆ ಕೊಯ್ದು ಭೀಕರ ಹತ್ಯೆ!
ಸ್ನೇಹಿತರೇ ರಾತ್ರಿ ಮುತ್ತು ಚಲವಾದಿಯನ್ನು ಪಾರ್ಟಿ ಮಾಡೋಣ ಬಾ ಎಂದು ಕರೆದುಕೊಂಡು ಹೋಗಿದ್ದರು ಎಂದು ಪೋಷಕರು ತಿಳಿಸಿದ್ದಾರೆ. ಮೀಟರ್ ಬಡ್ಡಿ ಮಾಫಿಯಾ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್.ಪಿ ಯತೀಶ್ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್, ಇನ್ಸ್ಪೆಕ್ಟರ್ಗಳಾದ ಸಾಲಿಮಠ ಹಾಗೂ ಸುಬ್ಬಾಪೂರಮಠ, ನಗರ ಠಾಣೆಯ ಪಿಎಸ್ಐ ಜಕ್ಕಲಿ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.