ಗದಗ:ಚಳಿಗಾಲ ಮೆಲ್ಲನೆ ಮರೆಯಾಗುತ್ತಿದ್ದು, ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದನ್ನರಿತ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಅವರು ವಾಹನ ಸವಾರರಿಗೆ ಅನುಕೂಲ ಆಗುವಂತಹ ಕೆಲಸವೊಂದನ್ನು ಮಾಡಿದ್ದಾರೆ. ಅವರು ಮಾಡಿರುವ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು, ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್ನಲ್ಲಿ ಬಿಸಿಲಿನ ಬೇಗೆಯಲ್ಲಿ ಒದ್ದಾಡುತ್ತಿದ್ದ ವಾಹನ ಸವಾರರಿಗೆ ಹಸಿರು ನರ್ಸರಿ ಟಾರ್ಪಲ್ ಹಾಕಿ ನೆರಳು ಕಲ್ಪಿಸಿಕೊಡುವ ಹೊಸ ವ್ಯವಸ್ಥೆ ಮಾಡಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಬೇಸಿಗೆ ಕಾಲದಲ್ಲಿ ಈ ಭಾಗದಲ್ಲಿ ಹೊರಗೆ ಸಂಚರಿಸುವುದೇ ಬಹಳ ಕಷ್ಟವಾಗಿರುತ್ತದೆ. ಅದರಲ್ಲೂ ಸಿಗ್ನಲ್ನಲ್ಲಿ ಕೆಲವೊಂದಷ್ಟು ಹೊತ್ತು ನಿಲ್ಲುವುದೆಂದರೆ ಇನ್ನೂ ತ್ರಾಸದಾಯಕ ಕೆಲಸ. ಬಿಸಿಲಿನ ಬೇಗೆಯಲ್ಲಿ ಸಿಗ್ನಲ್ನಲ್ಲಿ ನಿಲ್ಲುವ ಕಿರಿಕಿರಿಯನ್ನು ತಪ್ಪಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈ ಕ್ರಮ ಕೈಗೊಂಡಿದ್ದಾರೆ.
ಟ್ರಾಫಿಕ್ ಕಿರಿಕಿರಿ ಮತ್ತು ಬಿಸಿಲಿನಿಂದ ಬೇಸತ್ತ ಜನರಿಗೆ ಇದರಿಂದ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಸಿಗಲಿದೆ. ಎಷ್ಟೇ ಟ್ರಾಫಿಕ್ ಆದರೂ ಈ ಹಸಿರು ನರ್ಸರಿ ತಾರ್ಪಾಲಿನ್ ನೆರಳಿನಲ್ಲಿ ನಿಂತು ರಿಲ್ಯಾಕ್ಸ್ ಮಾಡಿ ಆ ಬಳಿಕ ಸವಾರ ತನ್ನ ಪ್ರಯಾಣವನ್ನು ಮುಂದುವರೆಸಬಹುದಾಗಿದೆ. 'ಗದಗ-ಬೆಟಗೇರಿ ನಗರಸಭೆಯ ಸಂಯೋಗದೊಂದಿಗೆ ಮುಳುಗುಂದ ನಾಕಾ ಟ್ರಾಫಿಕ್ ಸಿಗ್ನಲ್ನಲ್ಲಿ ವಾಹನ ಸವಾರರು ಎದುರಿಸುವ ಬಿಸಿಲು ಬೇಗೆಯನ್ನು ನಿವಾರಿಸಲು ಹಸಿರು ನರ್ಸರಿ ತಾರ್ಪಾಲಿನ್ ಅಳವಡಿಸಿ ನೆರಳು ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ವಾಹನ ಸವಾರರಿಗೆ ಅನುಕೂಲವಾಗಲಿದೆ' ಎಂದು ಅವರೇ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದಾರೆ.