ಗದಗ: ನಗರದ ಬೆಟಗೇರಿಯಲ್ಲಿ ನಿರ್ಮಾಣವಾಗಿರುವ ಹೈಟೆಕ್ ತಾರಾಲಯವನ್ನು ಶಾಸಕ ಹೆಚ್.ಕೆ.ಪಾಟೀಲ್ ಲೋಕಾರ್ಪಣೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು, ಬೆಟಗೇರಿಯಲ್ಲಿ ತಾರಾಲಯ ನಿರ್ಮಾಣದಲ್ಲಿ ಸಿದ್ದರಾಮಯ್ಯ ಕೊಡುಗೆ ಅಪಾರ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು. ಸಿದ್ದರಾಮಯ್ಯನವರ ಹೆಸರನ್ನು ಮಾತ್ರ ಪ್ರಸ್ತಾಪಿಸಿ ಭಾಷಣ ಮಾಡಿದ್ದಕ್ಕೆ ಹೆಚ್.ಕೆ.ಪಾಟೀಲ್ ವಿರುದ್ಧ ಬಿಜೆಪಿಯ ಪರಿಷತ್ ಸದಸ್ಯ ವಿ.ಎಸ್.ಸಂಕನೂರ ಕಿಡಿಕಾರಿದರು.
ಸಂಕನೂರ ಅಸಮಾಧಾನವೇನು?: ಕೇವಲ ಸಿದ್ದರಾಮಯ್ಯನವರ ಕಾಲದಲ್ಲಿ ಅನುದಾನ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿಯೂ ಅನುದಾನ ನೀಡಲಾಗಿದೆ. ಹೀಗಾಗಿ ನಮ್ಮ ಸರ್ಕಾರದ ಸಚಿವರ ಬಗ್ಗೆ ಮಾತನಾಡಬೇಕಿತ್ತು. ಸ್ಥಳೀಯ ಸಚಿವರು ಸಿ.ಸಿ.ಪಾಟೀಲ್, ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು ಎಂದರು. ಶಾಸಕರು ತರಾತುರಿಯಲ್ಲಿ ತಾರಾಲಯ ಉದ್ಘಾಟಿಸುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಸಂಕನೂರ, ಕೇವಲ ತಮ್ಮ ಪಕ್ಷಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ಉದ್ದೇಶದಿಂದ ಈ ರೀತಿ ವರ್ತಿಸಿದ್ದಾರೆ. ಈಗ ಚುನಾವಣೆ ಬಂದಿದೆ. ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ 7 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೇವಲ 1 ಕೋಟಿ ರೂ. ಕೊಟ್ಟಿದ್ದಾರೆ. ತಾರಾಲಯ ನಿರ್ಮಾಣಕ್ಕೆ ನಮ್ಮ ಸರ್ಕಾರವೇ ಹೆಚ್ಚು ಅನುದಾನ ನೀಡಿದೆ. ಆದರೆ ಹೆಚ್.ಕೆ.ಪಾಟೀಲ್ ಹಿರಿಯರು, ಅನುಭವ ಉಳ್ಳವರು ಈ ರೀತಿ ರಾಜಕೀಯ ಮಾಡಿದ್ದು ಸರಿಯಲ್ಲ. ಉನ್ನತ ಸಚಿವ ಅಶ್ವತ್ಥ ನಾರಾಯಣ ಅವರಿಗೂ ಆಹ್ವಾನ ನೀಡಿಲ್ಲ. ಇದನ್ನು ಖಂಡಿಸುತ್ತೇನೆ ಎಂದರು.