ಗದಗ :ಘಟಿಕೋತ್ಸವದಲ್ಲಿ ಹಳ್ಳಿಯ ಸೊಗಡಿನ ವಾತಾವರಣ ನಿರ್ಮಾಣ ಆಗಿತ್ತು. ಎತ್ತ ನೋಡಿದರತ್ತ ಖಾದಿ ಬಟ್ಟೆಗಳು ತೊಟ್ಟ ವಿದ್ಯಾರ್ಥಿಗಳ ಕಲರವ ಜೋರಾಗಿತ್ತು. ತಲೆಗೆ ಗಾಂಧಿ ಟೋಪಿ ಸಿಂಗಾರಗೊಂಡಿದ್ದರು. ಚೆಪ್ಪರದ ವೇದಿಕೆಯಲ್ಲಿ ಸಾಧಕರಿಗೆ ಸನ್ಮಾನ ಮಾಡಲಾಗ್ತಿತ್ತು. ಈ ಎಲ್ಲ ಸಂಭ್ರಮದ ನಡುವೆ ವಿಶ್ವವಿದ್ಯಾಲಯಕ್ಕೆ ಕಪ್ಪು ಚುಕ್ಕೆಯೊಂದು ಉಳಿದುಕೊಂಡಿದೆ. ಸಿಬ್ಬಂದಿ ಮಾಡಿರುವ ಎಡವಟ್ಟುನಿಂದಾಗಿ ಕುಲಪತಿಗಳು ಕ್ಷಮೆ ಕೇಳುವಂತಾಗಿದೆ.
ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ವಿಶ್ವವಿದ್ಯಾಲಯದಲ್ಲಿ ಬುಧವಾರ 2ನೇ ಘಟಿಕೋತ್ಸವ ಕಾರ್ಯಕ್ರಮ ಜರುಗಿತು. ಈ ವೇಳೆ ಗ್ರಾಮೀಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಕುಲಾಧಿಪತಿಗಳೂ ಆದ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ವಿವಿದ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಮೂರು ಜನ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ನಿವೃತ್ತ ಐಎಸ್ ಅಧಿಕಾರಿ ಡಾ. ಎಸ್.ಎಸ್ ಮೀನಾಕ್ಷಿ ಸುಂದರಂ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಸೀತವ್ವ ಜೋಡಟ್ಟಿ ಅವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ನೀಡಿದ್ರು. ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ ರಂಗನಾಥ ಅನುಪಸ್ಥಿತರಾಗಿದ್ದರು. ಇನ್ನು ಇದೇ ವೇಳೆ 10 ಜನ ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಜೊತೆಗೆ 139 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ನೀಡಿ ಗೌರವಿಸಲಾಯಿತು.
ಓದಿ:ಹಸಿರು ಇಂಧನ ಬಳಕೆ ಉತ್ತೇಜಿಸುವ ನವೀಕರಿಸಬಹುದಾದ ಇಂಧನ ನೀತಿಗೆ ಸಚಿವ ಸಂಪುಟ ಸಭೆ ಅಸ್ತು!
ಪದವಿ ಪ್ರದಾನದ ಬಳಿಕ ಮಾತನಾಡಿದ ರಾಜ್ಯಪಾಲರು, ಯುವ ಸಮುದಾಯ ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ ಏಕ ಭಾರತ ಶ್ರೇಷ್ಠ ಭಾರತ ನಿರ್ಮಿಸುವ ಗುರಿ ನಾವು ಹೊಂದಬೇಕಿದೆ. ಭಾರತಕ್ಕೆ ವಿಶ್ವಗುರುವಿನ ಗೌರವ ದೊರಕಿಸಿಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ದೃಢ ಹೆಜ್ಜೆಯನ್ನು ಇಡಬೇಕಿದೆ. ಸ್ವಾಮಿ ವಿವೇಕಾನಂದರ ಕನಸಿನಂತೆ ಸೂಕ್ತ ಅವಕಾಶಗಳು ನ್ಯಾಯ, ನೈತಿಕ ಮೌಲ್ಯಗಳೊಂದಿಗೆ ಭಾರತವು ಸದೃಢವಾಗುವುದರ ಜತೆಗೆ ನಿಜವಾದ ಅರ್ಥದಲ್ಲಿ ವಿಶ್ವ ನಾಯಕನಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ತಿಳಿಸಿದರು.