ಗದಗ: ಸರ್ಕಾರಿ ಶಾಲೆಗಳು ಅಂದ್ರೆ ನೆಪ ಮಾತ್ರಕ್ಕೆ ಅನ್ನೋ ಮಾತಿದೆ. ಆದ್ರೆ ಇಲ್ಲೊಂದು ಸರ್ಕಾರಿ ಶಾಲೆಯ ಶಿಕ್ಷಕರು ಮಾತ್ರ ಮಕ್ಕಳ ಹಾಜರಾತಿ ಹೆಚ್ಚಿಸಲು ಪಣ ತೊಟ್ಟಿದ್ದು, ಒಂದು ದಿನವೂ ರಜೆ ಹಾಕದಂತೆ ನೋಡಿಕೊಳ್ಳುತ್ತಾರೆ. ಜೊತೆಗೆ ಪ್ರತಿ ವರ್ಷ ಮಕ್ಕಳ ಸಂಖ್ಯೆ ಹೆಚ್ಚಿಸಲು ಮಾಡಿರುವ ಮಾಸ್ಟರ್ ಪ್ಲಾನ್ ಕೂಡ ಸಕ್ಸಸ್ ಆಗಿದೆ.
ಗದಗ ತಾಲೂಕಿನ ಹೊಸಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಆಕರ್ಷಣೆಗೆ ಹಲವಾರು ಯೋಜನೆಗಳನ್ನು ಹಾಕಿಕೊಂಡು ಪ್ರತಿ ವರ್ಷ ಮಕ್ಕಳ ಸಂಖ್ಯೆಯ ಜೊತೆಗೆ ಹಾಜರಾತಿಯನ್ನು ಹೆಚ್ಚಿಸುತ್ತಿದ್ದಾರೆ. ಈ ಗುರಿ ಸಾಧನೆಗೆ ಹಾಕಿಕೊಂಡಿರುವ ಯೋಜನೆ ಅಂದ್ರೆ ತರಹೇವಾರಿ ತಿಂಡಿ ತಿನಿಸುಗಳು. ಹೌದು, ಶಿಕ್ಷಣ ಮಾತ್ರವಲ್ಲದೆ ಮಕ್ಕಳ ಪೌಷ್ಟಿಕತೆಗೆ ಸಹ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಮಕ್ಕಳನ್ನು ಆಕರ್ಷಿಸುತ್ತಿರುವ ಸರ್ಕಾರಿ ಶಾಲೆ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಒತ್ತು: ಪ್ರತಿದಿನ ವಿಶೇಷವಾಗಿ ಇರುವ ತಿಂಡಿಗಳನ್ನು ಮಕ್ಕಳಿಗೆ ಕೊಡ್ತಿದ್ದಾರೆ. ಒಂದು ದಿನ ಉಪ್ಪಿಟ್ಟು, ಪಲಾವ್, ಇದರ ಜೊತೆಗೆ ಪ್ರತಿ ಶನಿವಾರ ಇಡ್ಲಿ ಕೊಡುವುದರ ಮೂಲಕ ಶಿಕ್ಷಕರು ಮಕ್ಕಳ ಆಕರ್ಷಣೆಗೆ ಯಶಸ್ವಿ ಮಾರ್ಗ ಕಂಡುಕೊಂಡಿದ್ದಾರೆ. ಇಡ್ಲಿ ಜೊತೆಗೆ ಘಮಘಮಿಸೋ ಸಾಂಬಾರ್ ಸಹ ಸಖತ್ ಆಗಿರುತ್ತದೆ. ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಸಲುವಾಗಿ ವಿವಿಧ ಬಗೆಯ ಸೊಪ್ಪನ್ನು ಉಪಯೋಗಿಸಲಾಗುತ್ತದೆ. ಇದರಿಂದಾಗಿ ಮಕ್ಕಳು ತಪ್ಪದೇ ಶಾಲೆಗೆ ಹಾಜರಾಗ್ತಿದ್ದಾರೆ. ಶಾಲೆಯನ್ನು ಆಕರ್ಷಣೆಗೊಳಿಸುವುದು ಅಷ್ಟೇ ಅಲ್ಲದೇ, ಮಕ್ಕಳಿಗೆ ಇಷ್ಟವಾಗುವ ತಿಂಡಿ ಕೊಡಬೇಕು ಅಂತಿದ್ದಾರೆ ಶಿಕ್ಷಕರು.
ಒಂದು ಕಾಲದಲ್ಲಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿತ್ತು. ಅದಕ್ಕೆ ಕಾರಣ ಈ ಗ್ರಾಮದಲ್ಲಿ ಪ್ರಾರಂಭವಾದ ಖಾಸಗಿ ಶಾಲೆ ಇದೆ. ಜೊತೆಗೆ ಪಕ್ಕದಲ್ಲಿ ಕೆಲವೇ ಕಿ.ಮೀ. ಅಂತರದಲ್ಲಿ ಹುಲಕೋಟಿ, ಗದಗ ನಗರಗಳಿವೆ. ತಮ್ಮದೇ ಊರಲ್ಲಿ ಇದ್ದ ಸರ್ಕಾರಿ ಶಾಲೆ ಬಿಟ್ಟು ಮಕ್ಕಳು, ಪೋಷಕರು ಸಿಟಿಯಲ್ಲಿ ಇರುವ ಖಾಸಗಿ ಶಾಲೆಗಳಿಗೆ ಮಾರು ಹೋಗುತ್ತಿದ್ದರು. ಹಾಗಾಗಿ ಶಿಕ್ಷಕರು ಈ ಯೋಜನೆ ರೂಪಿಸಿ ಗುಣಮಟ್ಟದ ಶಿಕ್ಷಣದ ಜೊತೆಗೆ ಆರೋಗ್ಯಕ್ಕೂ ಒತ್ತು ನೀಡುವ ಮೂಲಕ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುತ್ತಿದ್ದಾರೆ.