ಗದಗ: ನಗರದ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಿ.ಬಿ. ಪಾಟೀಲ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರ ನಡುವಿನ ಗುದ್ದಾಟದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದಂತಾಗಿದೆ.
ಹೌದು, ಗದಗ ನಗರದಲ್ಲಿರೋ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಮಾರು 60 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅಂತ್ರತ್ರ ಸ್ಥಿತಿಯಲ್ಲಿದೆ. GNM (ಜನರಲ್ ನರ್ಸಿಂಗ್ ಮಿಡ್ ವೈಫರಿ) ಕೋರ್ಸ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ತರಗತಿ ನಡೆಯದೇ ಇರುವ ಕಾರಣ ಬೀದಿಯಲ್ಲಿ ನಿಂತಿದ್ದಾರೆ. ಇದಕ್ಕೆಲ್ಲ ಮುಖ್ಯ ಕಾರಣ ಬಸವೇಶ್ವರ ಪ್ಯಾರಾಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಿ.ಬಿ ಪಾಟೀಲ್ ಎನ್ನಲಾಗಿದೆ.
ಅತಂತ್ರ ಸ್ಥಿತಿಯಲ್ಲಿ 60 ಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯ ಡಿ.ಬಿ ಪಾಟೀಲ್ ಬಸವೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಹೆಸರಲ್ಲಿ ಪ್ರವೇಶ ಕೊಟ್ಟು ಬಳಿಕ ಮತ್ತೊಂದು ಕಾಲೇಜು ಹೆಸರಿನಲ್ಲಿ ಪ್ರವೇಶ ರಶೀದಿ ಕೊಟ್ಟಿದ್ದಾರೆ. ಆದ್ರೂ ಸಹ ಎರಡು ಮೂರು ತಿಂಗಳು ಇದೇ ಕಾಲೇಜಿನಲ್ಲಿ ತರಗತಿಗಳು ಸುಸೂತ್ರವಾಗಿ ನಡೆದಿವೆ. ಆದರೆ ಈಗ ತರಗತಿಗಳು ನಡೆಯದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ.
ಇದಕ್ಕೆಲ್ಲ ಕಾರಣ ಕಾಲೇಜು ಆಡಳಿತ ಮಂಡಳಿಯ ನಡುವಿನ ಒಳಜಗಳ ಅಂತ ವಿದ್ಯಾರ್ಥಿಗಳು ಆರೋಪ ಮಾಡ್ತಿದ್ದಾರೆ. ಹೀಗಾಗಿ, ನಿನ್ನೆ ಪ್ರಿನ್ಸಿಪಾಲ್ ಮನೆ ಮುಂದೆ ವಿದ್ಯಾರ್ಥಿಗಳು ನ್ಯಾಯ ಕೇಳಲು ಹೋಗಿದ್ದರು, ಆದ್ರೆ ಪ್ರಾಂಶುಪಾಲ ಮಾತ್ರ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜ್ಗೆ ಆಗಮಿಸಿ ಕಾರ್ಯದರ್ಶಿ ಕಚೇರಿಗೆ ನುಗ್ಗಿ ಬಿ.ವಿ ಹುಬ್ಬಳ್ಳಿ ಅವರಿಗೆ ತೀವ್ರ ತರಾಟೆ ತೆಗೆದುಕೊಂಡರು.
ಪೋಷಕರೊಬ್ಬರು ನಿಮ್ಮ ಕಾಲು ಮುಗಿತೀನಿ, ನಮ್ಮ ಮಕ್ಕಳ ಭವಿಷ್ಯದ ಜೊತೆ ಆಟವಾಡಬೇಡಿ ಅಂತ ಮನವಿ ಮಾಡಿದರು. ಎರಡು ಮೂರು ತಿಂಗಳು ಸುಸೂತ್ರವಾಗಿ ತರಗತಿ ನಡೆಸಿದ ನೀವು, ಈಗ ಯಾಕೆ ಇದ್ದಕ್ಕಿದ್ದಂತೆ ತರಗತಿ ನಡೆಸುತ್ತಿಲ್ಲ. ನಿಮ್ಮ ಜಗಳದಿಂದ ನಮ್ಮ ಭವಿಷ್ಯದ ಮೇಲೆ ಬರೆ ಹಾಕ್ತಿದ್ದೀರಿ ಅಂತಾ ಕಿಡಿಕಾರಿದರು. ಪೋಷಕರು ಸಹ ಮಕ್ಕಳ ಜೊತೆ ಸೇರಿ ಕಾರ್ಯದರ್ಶಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡರು. ನಮ್ಮ ಮಕ್ಕಳ ಶಿಕ್ಷಣದಲ್ಲಿ ಸ್ವಲ್ಪ ಕುಂದುಕೊರತೆಯಾದ್ರೆ ಇದಕ್ಕೆಲ್ಲ ನೀವೇ ಕಾರಣ ಅಂತ ಕೆಂಡಕಾರಿದರು.
ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಲಿ ಅಂತ ಪೋಷಕರು ಸಾಲಸೂಲ ಮಾಡಿ ಅಡ್ಮಿಷನ್ ಮಾಡಿಸಿದ್ದಾರೆ. ಆದರೆ, ಹೆತ್ತವರ ಆಸೆ, ವಿದ್ಯಾರ್ಥಿಗಳ ಕನಸಿಗೆ ಕಾಲೇಜು ಒಳಜಗಳ ಕೊಳ್ಳಿ ಇಟ್ಟಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಗದಗ ಶಹರ ಪೊಲೀಸರು ಸಮಸ್ಯೆ ಇತ್ಯರ್ಥ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.
ಇದನ್ನೂ ಓದಿ;ಪಾವಗಡ ಬಸ್ ದುರಂತ ಪ್ರಕರಣ: ಚಿಕಿತ್ಸೆ ಫಲಿಸದೇ ಯುವಕ ಸಾವು, ಮೃತರ ಸಂಖ್ಯೆ 7ಕ್ಕೆ ಏರಿಕೆ