ಗದಗ: ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದೆ. ವಿದ್ಯಾರ್ಥಿಗಳು ಓದುವ ಪುಸ್ತಕಗಳಿಗೂ ಹಾನಿಯಾಗಿವೆ. ಹಾಳಾದ ಪುಸ್ತಕ ನೋಡಿ ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕುತ್ತಿದ್ದ ದೃಶ್ಯ ಗದಗದ ಬೆಟಗೇರಿಯ ಮಂಜುನಾಥ ನಗರದಲ್ಲಿ ಕಂಡುಬಂತು.
ಹಾಳಾದ ಪುಸ್ತಕ ನೋಡಿ ಕಣ್ಣೀರು ಹಾಕುತ್ತಿರುವ ವಿದ್ಯಾರ್ಥಿನಿ ಕಡು ಬಡತನದಲ್ಲಿ ಹುಟ್ಟಿದ ಸೊಮೀಯಾ ಅಂಡೆವಾಲ ಎಂಬಾಕೆ ಮಂಜುನಾಥ ನಗರದ ನಂಬರ್ 4ರ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆ ಬಡವಳಾದರೂ ಓದಿನಲ್ಲಿ ಜಾಣೆ. ಈಕೆಗೆ ಶಾಲೆಯ ಶಿಕ್ಷಕರು ಓದಲು, ಬರೆಯಲು ಪುಸ್ತಕಗಳನ್ನು ಕೊಡಿಸಿದ್ದರು. ಕಷ್ಟಪಟ್ಟು ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಜಡಿ ಮಳೆ ಆಕೆಯ ಕನಸುಗಳಿಗೀಗ ತಣ್ಣೀರೆರಚಿದೆ.
ಮಳೆಯಿಂದಾಗಿ ಸೊಮೀಯಾಳ ಬ್ಯಾಗ್ನಲ್ಲಿದ್ದ ಪುಸ್ತಕಗಳು ಸಂಪೂರ್ಣ ಹಾಳಾಗಿದ್ದು, ಕಣ್ಣೀರು ಹಾಕುತ್ತಲೇ ಬಿಸಿಲಿನಲ್ಲಿ ಒಣಗಿಸುತ್ತಿದ್ದಾಳೆ. ನನಗೆ ಯಾರಾದರೂ ಪುಸ್ತಕಗಳನ್ನು ಕೊಡಿಸಿ ಅನ್ನೋದು ಆಕೆಯ ಮನವಿ.
ಸೊಮೀಯಾಗೆ ತಾಯಿಯಿಲ್ಲ. ಅಜ್ಜಿಯ ಜೊತೆ ಪುಟ್ಟ ಮನೆಯಲ್ಲಿ ಈಕೆಯ ವಾಸ. ಬಡತನದಲ್ಲಿ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆಯುವ ಕನಸು ಕಾಣುತ್ತಿರುವ ಪುಟಾಣಿಗೆ ಮಳೆಯಿಂದ ಶಿಕ್ಷಣಕ್ಕೆ ಕೊಂಚ ಅಡ್ಡಿಯಾಗಿದೆ. ನೊಂದ ವಿದ್ಯಾರ್ಥಿನಿಗೆ ಸಹೃದಯರು ಸಹಾಯ ಮಾಡಬಹುದು.
ಇದನ್ನೂ ಓದಿ:ಗದಗ: ಔಷಧ ಉಗ್ರಾಣಕ್ಕೆ ನುಗ್ಗಿದ ಮಳೆ ನೀರು.. ಅಂದಾಜು 4 ಕೋಟಿ ಮೌಲ್ಯದ ಔಷಧಗಳು ಜಲಾವೃತ