ಗದಗ: ಜಿಲ್ಲೆಯಲ್ಲಿ ನಡೆದ ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಈ ಪ್ರಕರಣದಲ್ಲಿ ಇಬ್ಬರು ಪತ್ರಕರ್ತರು, ಪೊಲೀಸರು ಸೇರಿ ಒಟ್ಟು 9 ಜನರ ವಿರುದ್ಧ ಕಿರುಕುಳ, ಬ್ಲಾಕ್ ಮೇಲೆ ಆರೋಪ ಕೇಳಿಬಂದಿದೆ.
ವಿವರ: ಗದಗ ನಗರದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಆಗಿದ್ದ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಅರ್ಜುನ್ ಪಾಟೀಲ್ ಗುರುವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ದುಷ್ಕರ್ಮಿಗಳ ಕಿರುಕುಳ ಹೆಚ್ಚಾಗಿದ್ದು, ಮಾನಸಿಕ ಹಿಂಸೆ ತಾಳಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ಡೆತ್ ನೋಟ್ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಪುಟ್ಟಪ್ಪ ಕೌಜಲಗಿ, ಸಿವಿ ನಾಯಕ್, ಗದಗ ಸಂಚಾರಿ ಪೊಲೀಸ್ ಠಾಣೆಯ ದಾದಾಪೀರ್ ಮಂಜಲಾಪುರ, ಸಿಇಎನ್ ಪೊಲೀಸ್ ಠಾಣೆಯ ಶರಣಪ್ಪ ಅಂಗಡಿ, ಮುಂಡರಗಿ ಪೊಲೀಸ್ ಠಾಣೆಯ ಅಂದಪ್ಪ ಹಣಜಿ ಸೇರಿದಂತೆ ಪತ್ರಕರ್ತರಾದ ಗಿರೀಶ ಕುಲಕರ್ಣಿ, ಭೀಮನಗೌಡ ಪಾಟೀಲ್ ಸೇರಿದಂತೆ ಒಂಬತ್ತು ಜನರು ಕಿರುಕುಳ ನೀಡಿದ್ದಾರೆ. ಇವರ ಕಿರುಕುಳದಿಂದ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಂದೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.