ಗದಗ :ಸರ್ಕಾರದ ಯೋಜನೆಗಳು ನಾನಾ ಸ್ವರೂಪ ಪಡೆದುಕೊಳ್ಳುತ್ತಿವೆ. ಮಕ್ಕಳಿಗೆ ಶೂ ಬದಲು ಚಪ್ಪಲಿ ನೀಡಲಾಗಿದೆ. ಸರ್ಕಾರದ ದ್ವಂದ್ವ ನಿಲುವಿನ ಆದೇಶದಿಂದ ಮಕ್ಕಳು ಹಾಗೂ ಪಾಲಕರಿಗೆ ಬೇಸರ ಮೂಡಿಸಿದೆ. ಜಿಲ್ಲೆಯಲ್ಲಿ 612 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಆ ಶಾಲಾ ಮಕ್ಕಳ ಶೂ, ಸಾಕ್ಸ್ ಖರೀದಿಗಾಗಿ 2 ಕೋಟಿ, 36 ಲಕ್ಷ, 67 ಸಾವಿರ 930 ರೂಪಾಯಿ ನೀಡಲಾಗಿದೆ. ಇನ್ನು 113 ಸರ್ಕಾರಿ ಪ್ರೌಢ ಶಾಲೆಗಳಿದ್ದು, 5 ಲಕ್ಷ 28 ಸಾವಿರ 430 ರೂಪಾಯಿ ನೀಡಲಾಗಿದೆ. ಆದರೆ ಲಕ್ಷ್ಮೇಶ್ವರ ಪಟ್ಟಣದ 2 ಶಾಲೆಗಳಿಗೆ ಶೂ, ಸಾಕ್ಸ್ ಬದಲಾಗಿ ಚಪ್ಪಲಿ ಭಾಗ್ಯ ಕಲ್ಪಿಸಲಾಗಿದೆ.
ಲಕ್ಷ್ಮೇಶ್ವರ ಬಸ್ತಿಬಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 02 ಹಾಗೂ ಕೆಂಚಲಪುರ ಸರ್ಕಾರಿ ಶಾಲೆ ಮಕ್ಕಳಿಗೆ ಶೂ ಬದಲಿಗೆ ಚಪ್ಪಲಿ ನೀಡಲಾಗಿದೆ. ಒಂದೇ ಮನೆಯಿಂದ ಬೇರೆ ಬೇರೆ ಶಾಲೆಗೆ ಹೋಗುವ ಮಕ್ಕಳಲ್ಲಿ, ಶೂ, ಚಪ್ಪಲಿ ವಿಷಯವಾಗಿ ಗಲಾಟೆಗಳು ನಡೆದಿವೆ ಎನ್ನಲಾಗ್ತಿದೆ. ಸರ್ಕಾರ ಶೂ, ಸಾಕ್ಸ್ ವಿಷಯದಲ್ಲಿ ಮಕ್ಕಳಲ್ಲಿ ದ್ವಂದ್ವ ನೀತಿ ಮೂಡಿಸಿದೆ. ಇದು ಖಂಡನೀಯ. ಶಿಕ್ಷಣ ಇಲಾಖೆ ಆದೇಶದಿಂದ ಮಕ್ಕಳಿಗೆ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬಣ್ಣ ಹಚ್ಚುತ್ತಿದೆ ಎಂಬ ಆರೋಪ ಪಾಲಕರದ್ದಾಗಿದೆ.
ಪಾಲಕರ ಆರೋಪಗಳ ಬಗ್ಗೆ ಡಿಡಿಪಿಐ ಹೇಳುವುದಿಷ್ಟು: ’’ರಾಜ್ಯದಲ್ಲಿ ಆಯಾ ಭಾಗದ ಪರಿಸರಕ್ಕೆ ಹೊಂದಿಕೆ ಆಗುವಂತಹ ಶೂ ಅಥವಾ ಚಪ್ಪಲಿ ಖರೀದಿಸಬಹುದು ಎಂದು ಆದೇಶ ಹೊರಡಿಸಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಹೆಚ್ಚಾಗುತ್ತಿದ್ದು, ಅಲ್ಲಿ ಶೂ ಒಳ್ಳೆಯದು. ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣಾಂಶ ಹೆಚ್ಚಿರುವ ಹಿನ್ನಲೆ, ಬೆವರಿನಿಂದ ಶೂ ವಾಸನೆ ಬರುತ್ತವೆ. ಹೀಗಾಗಿ ಚಪ್ಪಲಿ ಖರೀದಿಸಬಹುದು ಎಂದು ಆದೇಶಿಸಲಾಗಿದೆ. ಹೀಗಾಗಿ ಲಕ್ಷ್ಮೇಶ್ವರ ಪಟ್ಟಣದ ಎರಡು ಶಾಲೆಗಳಲ್ಲಿ ಶೂ ಭಾಗ್ಯ ಬದಲು ಚಪ್ಪಲಿ ಭಾಗ್ಯ ಕಲ್ಪಿಸಲಾಗಿದೆ. ಉತ್ತಮ ಗುಣ ಮಟ್ಟದ ಶೂ ಅಥವಾ ಪಾದರಕ್ಷೆಗಳನ್ನು ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿ ಆಯಾ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಲಾಗಿದೆ. ಗದಗ ಭಾಗದಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳುವ ಶೂಕ್ಕಿಂತ ಚಪ್ಪಲಿ ಒಳ್ಳೆಯದೆಂದು ಖರೀದಿಸಲಾಗಿದೆಯಂತೆ. ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡಲಾಗುತ್ತೆ. ಶೂ ಅಥವಾ ಚಪ್ಪಲಿ ಖರೀದಿ ನಿರ್ಧಾರ ಎಸ್.ಡಿ.ಎಂ.ಸಿ ತೆಗೆದುಕೊಳ್ಳುತ್ತೆ. ಈ ಹಣ ರಾಜ್ಯ ಕಚೇರಿಯಿಂದ ಬಿಇಒ ಕಚೇರಿಗೆ ನೇರವಾಗಿ ಬಿಡುಗಡೆ ಆಗುತ್ತೆ‘‘ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಜಿಲ್ಲೆಯ ಉಪ ನಿರ್ದೇಶಕ ಜಿ ಎಲ್ ಭಾರಟೆಕ್ಕೆ ಹೇಳಿದ್ದಾರೆ.
ಇದನ್ನೂ ಓದಿ :ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಪೌಷ್ಟಿಕಾಂಶಯುಕ್ತ ಆಹಾರ ಕೊಡುವುದು ನಮ್ಮ ಸರ್ಕಾರದ ಆದ್ಯತೆ: ಸಚಿವ ಹೆಚ್ ಸಿ ಮಹದೇವಪ್ಪ