ಗದಗ: ಭರವಸೆ ನೀಡುತ್ತಾ ಭರ್ಜರಿ ಪ್ರಚಾರ ಗಿಟ್ಟಿಸಿಕೊಳ್ಳುವ ಬಿಜೆಪಿ ಶಾಸಕನಿಗೆ ಘೇರಾವ್ ಹಾಕಿ ಬೆವರಿಳಿಸಿದ ಘಟನೆ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿಗೆ ಶಿರೋಳ ಗ್ರಾಮಸ್ಥರು ಘೇರಾವ್ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಮುಂಡರಗಿ ತಾಲೂಕಿನ ಶಿರೋಳ ಗ್ರಾಮದ ರಸ್ತೆ ದುರಸ್ತಿ ಹಾಗೂ ನಾಲೆ (ಹಳ್ಳ) ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರು.
ಊರಿನ ರಸ್ತೆ ದುರಸ್ತಿ ಮಾಡಿ, ಊರಾಚೆ ಹಳ್ಳಕ್ಕೆ ಸೇತುವೆ ಇಲ್ಲ, ಮಳೆ ಬಂದ್ರೆ ಸಾಕಷ್ಟು ತೊಂದರೆಯಾಗುತ್ತದೆ ಎಂದು ಕಳೆದ 3 ವರ್ಷದಿಂದ ಶಾಸಕರಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಿನ್ನೆ ಶಾಸಕರ ಕಾರಿಗೆ ಮುತ್ತಿಗೆ ಹಾಕಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಶಾಸಕ ರಾಮಣ್ಣ ಲಮಾಣಿ ಕಾರಿಗೆ ಅಡ್ಡಹಾಕಿದ ಗ್ರಾಮಸ್ಥರು.. ಈ ವೇಳೆ ಮಧ್ಯಸ್ಥಿಕೆ ವಹಿಸಲು ಬಂದ ಬಿಜೆಪಿ ಮುಖಂಡ ಹಾಗೂ ಗುತ್ತಿಗೆದಾರ ಕೆ.ವಿ ಹಂಚನಾಳ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಕೆವಿ ಹಂಚಿನಾಳ ನೀವು ಶಾಸಕರಲ್ಲಾ, ರಾಮಣ್ಣ ಲಮಾಣಿ ಶಾಸಕರು.
ಅಭಿವೃದ್ಧಿ ವಿಷಯದಲ್ಲಿ ಅವರನ್ನು ಕೇಳುತ್ತಿದ್ದೇವೆ. ನೀವು ಮಧ್ಯೆ ಭಾಗವಹಿಸಬೇಡಿ ಅಂತಾ ಗುತ್ತಿಗೆದಾರನಿಗೆ ಖಡಕ್ ವಾರ್ನಿಂಗ್ ಕೊಟ್ಟು, ಅಭಿವೃದ್ಧಿ ಯೋಜನೆಗಳ ವಿಷಯದಲ್ಲಿ ಬರೀ ಆಶ್ವಾಸನೆ ನೀಡುತ್ತಾ ಬಂದಿದ್ದ ಶಾಸಕರಿಗೆ ಕ್ಲಾಸ್ ತೆಗೆದುಕೊಂಡರು.
ಹೆಚ್ಚು ಮಂದಿ ಜಮಾವಣೆಗೊಳ್ಳುತ್ತಿದ್ದಂತೆ ಮುಂದಿನ 2 ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಮತ್ತೆ ಭರವಸೆ ನೀಡಿ ಶಾಸಕ ರಾಮಣ್ಣ ಲಮಾಣಿ ಅಲ್ಲಿಂದ ಕಾಲ್ಕಿತ್ತರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಶಾಸಕರು ಮುಂದಕ್ಕೆ ಹೋಗದಂತೆ ಕಾರು ಅಡ್ಡಗಟ್ಟಲಾಗಿತ್ತು.
ಇದನ್ನೂ ಓದಿ;3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಕುಡುಕ