ಗದಗ:ರಾಜ್ಯ ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಸರ್ಕಾರ ಪೊಲೀಸ್ ಅಧಿಕಾರಿಗಳ ಮೂಲಕ ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಶಿರಹಟ್ಟಿಯ ಫಕೀರೇಶ್ವರ ಮಠದ ಫಕೀರ್ ದಿಂಗಾಲೇಶ್ವರ ಶ್ರೀ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಗೂಢಾಚಾರದ ಮೂಲಕ ನನ್ನ ಮೇಲಿನ ಕೇಸ್ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸರು ಬಾಲೆಹೊಸೂರಿನ ಮಠಕ್ಕೆ ಭೇಟಿ ನೀಡಿ ಭಕ್ತರಿಗೆ ಕಾಟ ಕೊಡುತ್ತಿದ್ದಾರೆ. ಈ ರೀತಿ ನನ್ನ ಹೆದರಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಿದರೆ ನಾನು ಹೆದರುವ ಸ್ವಾಮಿಯಲ್ಲ ಎಂದು ಅವರು ಹೇಳಿದ್ದಾರೆ.
ಸಚಿವ ಸಿ.ಸಿ.ಪಾಟೀಲ್ ಮನೆ ಮುಂದೆ ಪ್ರತಿಭಟನೆ:ಗದಗಿನ ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮದಿನದಿಂದ ಭಾವೈಕ್ಯತೆ ದಿನ ಘೋಷಣೆ ಮಾಡಿದ್ದಕ್ಕೂ ಶ್ರೀಗಳು ಆಕ್ಷೇಪ ಎತ್ತಿದ್ದರು. ಆದರೆ, ಸಚಿವ ಸಿ.ಸಿ.ಪಾಟೀಲ್ ಅವರು ಶ್ರೀಗಳ ಆಕ್ಷೇಪಣೆ ಖಂಡಿಸಿ ಶ್ರೀಗಳ ಹಿನ್ನೆಲೆ ಬಗ್ಗೆ ಮತ್ತು ಹಲವಾರು ಗುರುತರ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಈಗ ಸಿ.ಸಿ.ಪಾಟೀಲ್ ವಿರುದ್ಧ ಶ್ರೀಗಳು ಕಿಡಿಕಾರಿದ್ದಾರೆ.
ಇದೇ 27ನೇ ತಾರೀಖಿನೊಳಗಾಗಿ ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ಸಚಿವ ಸಿ.ಸಿ.ಪಾಟೀಲ್ ಸಾಬೀತು ಮಾಡಬೇಕು. ಸಾಬೀತಾದರೆ ನಾನು ಎಲ್ಲಾ ಮಠಗಳ ಪೀಠತ್ಯಾಗ ಮಾಡುತ್ತೇನೆ. ಒಂದು ವೇಳೆ ಸಾಬೀತು ಮಾಡದಿದ್ದರೆ ಏ.27ರಂದು ನರಗುಂದ ಪಟ್ಟಣದಲ್ಲಿರುವ ಸಿ.ಸಿ ಪಾಟೀಲ್ ಮನೆ ಎದುರು ಧರಣಿ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.