ಗದಗ: ಹಾಸಿ, ಹೊದ್ದಿಕೊಳ್ಳುವಷ್ಟು ಬಡತನದ ಮಧ್ಯೆಯು ಎಸ್ಸೆಸ್ಸೆಲ್ಸಿಯಲ್ಲಿ ಶೇಕಡಾ 90ರಷ್ಟು ಫಲಿತಾಂಶ ಪಡೆದು, ಎಲ್ಲರ ಮೆಚ್ಚುಗೆ ಗಳಿಸಿದ ಓಂಕಾರಿ ಕಲಾಲ್.
ಅಮ್ಮನ ಕೈತುತ್ತು, ಆಸರೆಯಲ್ಲಿ ಬೆಳೆಯ ಬೇಕಾದ ಓಂಕಾರಿ ತನ್ನ ಎರಡನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಳು. ಇನ್ನು 9ನೇ ತರಗತಿ ಓದುತ್ತಿರುವಾಗಲೇ ಅಪ್ಪನಿಗೆ ಪಾರ್ಶ್ವ ವಾಯು ತಗುಲಿತು. ಅಕ್ಷರಶಃ ಬಾಣಲೆಯಿಂದ ಬೆಂಕಿಗೆ ಬಿದ್ದತ್ತಾಗಿತ್ತು.
ನಗರದ ತೋಂಟದಾರ್ಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಓಂಕಾರಿ ಕಲಾಲ್, 10ನೇ ತರಗತಿಯಲ್ಲಿ 568 ಅಂಕಗಳನ್ನು ಪಡೆದಿದ್ದಾಳೆ.
ಈಕೆಯ ತಂದೆ ವೃತ್ತಿಯಲ್ಲಿ ಟೈಲರ್ ಆಗಿದ್ದವರು. ಇವರ ಆರೋಗ್ಯ ಹದಗೆಟ್ಟ ನಂತರ ಓಂಕಾರಿ ಅನಿವಾರ್ಯವಾಗಿ ಶಾಲೆ ತೊರೆದು, ಬೇರೆಯವರ ಮನೆಗಳಿಗೆ ಕೆಲಸಕ್ಕೆ ಹೊರಟಳು. ಪ್ರತಿಭಾನ್ವಿತ ವಿದ್ಯಾರ್ಥಿನಿಯ ಗೈರು ಹಾಜರಿ ಗಮನಿಸಿದ ಶಾಲಾ ಶಿಕ್ಷಕರು, ಈಕೆ ಸಹಪಾಠಿಗಳಿಂದ ಮಾಹಿತಿ ಪಡೆದು. ಉಚಿತ ಶಿಕ್ಷಣ ವ್ಯವಸ್ಥೆಯನ್ನು ಶಾಲಾ ಆಡಳಿತ ಮಂಡಳಿ ದೊರಕಿಸಿತು. ಜೊತೆಗೆ ಕುಟುಂಬಕ್ಕೂ ಆರ್ಥಿಕ ನೆರವು ನೀಡಿ, ಮಾನವೀಯತೆ ಮೆರೆದಿದ್ದರು. ಅಷ್ಟೇ ಅಲ್ಲ ಸಹಪಾಠಿಗಳ ಪಾಲಕರು 30 ಸಾವಿರ ನೀಡಿದ್ದರು.
ಇಂದು ಆ ಎಲ್ಲ ತ್ಯಾಗ, ಪರಿಶ್ರಮದ ಫಲವಾಗಿ ಉತ್ತಮ ಫಲಿತಾಂಶ ದೊರಕಿದೆ. ಓಂಕಾರಿ ಬಿಡುವಿನ ವೇಳೆಯಲ್ಲಿ ಅಗರಬತ್ತಿ ತಯಾರಿಸುದ್ದಾಳೆ. ಇದರಿಂದ ದಿನಕ್ಕೆ 100 ರೂಪಾಯಿ ಆದಾಯ ಬರುತ್ತಿದ್ದು, ಮನೆ ಖರ್ಚು ನಡೆಯುತ್ತಿದೆ.
ಓದುವ ಹಂಬಲ ಹೊತ್ತ ಓಂಕಾರಿಗೆ ಆರ್ಥಿಕ ನೆರವಿನ ಅವಶ್ಯಕತೆ ಇದೆ.