ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯ ಗ್ರಾಮದಲ್ಲಿರುವ ಶೆಟ್ಟಿ ಎಂಬ ಕೆರೆಯೊಂದರಲ್ಲಿ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಕಾಣಿಸಿಕೊಂಡಿವೆ. ಸುದ್ದಿ ತಿಳಿಯುತ್ತಿದ್ದಂತೆ ಕೆರೆಯಲ್ಲಿರು ನೀರು ನಾಯಿಗಳನ್ನು ನೋಡಲೆಂದು ಸುತ್ತ ಊರಿನ ಜನ ಇಲ್ಲಿಗೆ ಆಗಮಿಸತೊಡಗಿದ್ದಾರೆ.
ಪ್ರಸಕ್ತ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿವೆ. ಹಚ್ಚ ಹಸಿರಾದ ವಾತಾವರಣ ಇದೆ, ಹಾಗಾಗಿ ಸುಂದರ ತಾಣ ಹುಡುಕಿಕೊಂಡು ಇಲ್ಲಿಗೆ ನೀರು ನಾಯಿಗಳು ಬಂದಿರಬಹುದು ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ. ಕಾಶ್ಮೀರ, ಅಸ್ಸೋಂ ಹಾಗೂ ದಕ್ಷಿಣ ಭಾರತದಲ್ಲಿ ಅನೇಕ ಕಡೆ ಹಾಗೂ ತುಂಗಾಭದ್ರಾ ನದಿಯಲ್ಲಿ ಈ ಅಳಿವಿನ ಅಂಚಿನಲ್ಲಿರುವ ನೀರು ನಾಯಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಸದ್ಯ ಕೆರೆಯ ಅಚ್ಚುಕಟ್ಟು ಪ್ರದೇಶ (ಸುಮಾರು 234 ಎಕರೆ) ವಿಶಾಲವಾಗಿದ್ದರಿಂದ ಇಲ್ಲಿಯೇ ಬೀಡು ಬಿಟ್ಟಿವೆ ಎನ್ನುತ್ತಾರೆ ಜನ.
ಕೆರೆಯಲ್ಲಿ ನೀರು ನಾಯಿ ತಿರುಗಾಟ: ಅದಲ್ಲದೇ ಜಲಚರ ಪ್ರಾಣಿಗಳಿಗೆ ಹಾಗೂ ಪಕ್ಷಿಗಳಿಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಾಸಿಸಲು ವಾತಾವರಣ ಇದೆ. ಮೀನು, ಏಡಿ ಪ್ರಮುಖ ಆಹಾರವಾಗಿರುವ ಈ ನೀರು ನಾಯಿಗಳು ಸದ್ಯ ಕೆರೆಯಲ್ಲಿ ತಿರುಗಾಟ ನಡೆಸುತ್ತಿವೆ. ನೀರಿನಲ್ಲಿ ಅತ್ಯಂತ ವೇಗವಾಗಿ ಚಲಿಸುವ ಹಾಗೂ ಹರಿಯುವ ನೀರಿಗೆ ವಿರುದ್ದವಾಗಿ ಚಲಿಸುವ ಪ್ರಾಣಿ ಇದಾಗಿದೆ. ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಆಗಿರುವುದರಿಂದ ಹಳ್ಳ ಕೊಳ್ಳ ತುಂಬಿ ಹರಿದು ನದಿ ಸೇರುವಾಗ ನದಿಯ ಮೂಲಕ ನೀರು ನಾಯಿಗಳು ಹಳ್ಳಕ್ಕೆ ಬಂದು ಸೇರಿಕೊಂಡಿವೆ. ಇಂತಹ ಅಪರೂಪ ಪ್ರಾಣಿಗಳನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಈ ಪ್ರದೇಶ ಹೆಚ್ಚಾಗಿ ಬಯಲು ಸೀಮೆಯಿಂದ ಕೂಡಿದೆ. ಇಂತಹ ಅಪರೂಪದ ಪ್ರಾಣಿಗಳು ಇಲ್ಲಿ ಕಾಣಸಿಗುವುದು ತುಂಬಾ ಕಡಿಮೆ. ಸದ್ಯ ಶೆಟ್ಟಿ ಕೆರೆ ಚಿಕ್ಕದಾದ ಪ್ರಾಣಿ-ಪಕ್ಷಿಗಳ ಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಅಪರೂಪದ ಪ್ರಾಣಿಗಳು ಕಾಣಿಸಿಕೊಂಡಿರುವದು ಅಚ್ಚರಿ ಮೂಡಿಸಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.