ಗದಗ:ಈ ಬಾರಿಯ ಅತಿವೃಷ್ಠಿ ಹಾಗು ಪ್ರವಾಹಕ್ಕೆ ಸಿಲುಕಿ ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆ ಮಳೆ ನೀರಿಗೆ ಆಹುತಿಯಾಗಿದೆ. ವರ್ಷಧಾರೆಯ ರೌದ್ರ ನರ್ತನಕ್ಕೆ ಅಂದಾಜು 159 ಕೋಟಿ ರೂ ನಷ್ಟವಾಗಿದೆ ಎಂದು ಕೃಷಿ ಇಲಾಖೆ ವರದಿ ರೆಡಿ ಮಾಡಿದೆ.
ಬೆಣ್ಣೆ ಹಳ್ಳ ಹಾಗೂ ಮಲಪ್ರಭಾ ನದಿ ಉಕ್ಕಿ ಹರಿದು ಸಾಕಷ್ಟು ಪ್ರಮಾಣದಲ್ಲಿ ಬೆಳೆ ಮಣ್ಣು ಪಾಲಾಗಿತ್ತು. ಆದಾದ ಬಳಿಕ ನಿರಂತರವಾಗಿ ಮಳೆ ಮುಂದುವರೆದು ಹೆಸರು, ಶೇಂಗಾ, ಈರುಳ್ಳಿ, ಗೋವಿನ ಜೋಳ ಸೇರಿದಂತೆ ಇನ್ನಿತರ ಬೆಳೆಗಳು ಹಾನಿಗೊಳಗಾಗಿವೆ.
ಗದಗ, ಮುಂಡರಗಿ, ಶಿರಹಟ್ಟಿ, ಗಜೇಂದ್ರಗಡ, ಲಕ್ಷ್ಮೇಶ್ವರ, ರೋಣ ಹಾಗು ನರಗುಂದ ಸೇರಿದಂತೆ ಏಳು ತಾಲೂಕುಗಳನ್ನು ಅತಿವೃಷ್ಠಿ ವ್ಯಾಪ್ತಿಗೆ ಸೇರಿಸಲಾಗಿದೆ. ಮೊದಲ ಹಂತದಲ್ಲಿ ನಾಲ್ಕು ತಾಲೂಕುಗಳನ್ನು ಘೋಷಣೆ ಮಾಡಿದ್ದ ಸರ್ಕಾರ ಈಗ ಮತ್ತೆ ಮೂರು ತಾಲೂಕುಗಳನ್ನು ಅತಿವೃಷ್ಠಿ ವ್ಯಾಪ್ತಿಗೆ ಸೇರಿಸಿದೆ.
ಈಗಾಗಲೇ ಗದಗ ಜಿಲ್ಲಾ ಕೃಷಿ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದ್ದು, 63 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗೆ ತೊಂದರೆಯಾಗಿದೆ ಎಂದು ಅಂದಾಜು ಮಾಡಿದ್ದಾರೆ. 159 ಕೋಟಿ ರೂ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲು ಕೃಷಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.