ಗದಗ : ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗಿದೆ. ಓಡಾಡಲು ಸರಿಯಾದ ರಸ್ತೆಯಿಲ್ಲದೇ ಜನ ಹೆಣಗಾಡುತ್ತಿದ್ದಾರೆ.
ಕೆಸರು ತುಂಬಿದ ರಸ್ತೆಗಳು, ಕುಗ್ರಾಮವೆಂಬ ಹಣೆಪಟ್ಟಿ: ಗ್ರಾಮ ಪಂಚಾಯ್ತಿ ವಿರುದ್ಧ ಜನರ ಆಕ್ರೋಶ - ಗದಗದಲ್ಲಿ ಅಭಿವೃದ್ಧಿ ಕಾಣದ ಗ್ರಾಮಗಳು
ಗದಗ ಜಿಲ್ಲೆಯ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ಮಳೆಯಿಂದಾಗಿ ರಸ್ತೆಯೆಲ್ಲಾ ಕೆಸರುಮಯವಾಗಿದೆ.ಇದರಿಂದ ಓಡಾಡಲಾಗದೇ ಜನ ಪರದಾಡ್ತಿದ್ದಾರೆ. ಇನ್ನು ಈ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಕೂಡ ನಡೀತಿಲ್ಲ, ಹೀಗಾಗಿ ಜನರು ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಳೆಯಿಂದಾಗಿ ಗ್ರಾಮದ ಬಹುತೇಕ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಇದ್ರಿಂದ ಶಾಲೆಗೆ ಹೋಗುವ ಮಕ್ಕಳು, ಹೊಲಗದ್ದೆಗಳಿಗೆ ತೆರಳುವ ರೈತರು, ವಾಹನ ಸವಾರರು, ಪರದಾಡುತ್ತಿದ್ದಾರೆ. ಜೊತೆಗೆ ಎಲ್ಲ ಕಡೆ ನೀರು ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಕುಡಿಯುವ ನೀರಿನ ಟ್ಯಾಂಕ್ ಸಹ ಕೆಳಗೆ ಸಾಕಷ್ಟು ಗಲೀಜಾಗಿದೆ. ಹೀಗಾಗಿ ಆ ಗಲೀಜು ನೀರು ಪೈಪ್ ನಲ್ಲಿ ಸೇರಿ ಕುಡಿಯುವ ನೀರು ಮಲೀನವಾಗುತ್ತದೆ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಕಷ್ಟು ಬಾರಿ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೇ ಮನವಿ ಮಾಡಿದರೂ ಸಹ ಯಾರೂ ಕೇರ್ ಮಾಡ್ತಿಲ್ಲ. ಕ್ಷೇತ್ರದ ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮನವಿ ಮಾಡಿದ್ರು ಈ ಗ್ರಾಮದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹೀಗೆ ನಿರ್ಲಕ್ಷ್ಯ ತೋರಿದ್ರೆ ಜನರು ಸಾಂಕ್ರಾಮಿಕ ರೋಗಗಳಿಂದ ನರಳುವಂತಾಗುತ್ತೆ. ಇನ್ನಾದರೂ ಜಿಲ್ಲಾಡಳಿತಾದ್ರೂ ನಮ್ಮ ಸಮಸ್ಯೆಗಳನ್ನು ಆಲಿಸಲಿ ಎಂದು ಜನ ಅವಲತ್ತುಕೊಂಡಿದ್ದಾರೆ.