ಗದಗ: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿ ಪ್ರಾಣ ಬೆದರಿಕೆ ಹಾಕಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಮೌಲಾಸಾಬ ದೊಡ್ಡಮನಿ ಎಂಬಾತನಿಗೆ 25 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಗದಗ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
ಸವದತ್ತಿ ತಾಲೂಕಿನ ತೆರೆದಕೊಪ್ಪ ಗ್ರಾಮದ ಮೌಲಾಸಾಬ ಎಂಬ ವ್ಯಕ್ತಿ ಬಾಲಕಿಯೋರ್ವಳನ್ನು ಒತ್ತಾಯಪೂರ್ವಕ ಬೈಕ್‌ನಲ್ಲಿ ಕೂರಿಸಿಕೊಂಡು ನರಗುಂದ ಮತ್ತು ಮುನವಳ್ಳಿ ಕ್ರಾಸ್ ಬಳಿಯ ಒಂಟಿ ಮನೆಗೆ ಕರೆದುಕೊಂಡು ಹೋಗಿ ಚಾಕು ತೋರಿಸಿ, ಪ್ರಜ್ಞೆ ತಪ್ಪುವ ಮಾತ್ರೆ ನೀಡಿ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಪ್ರಕರಣ 2018ರಲ್ಲಿ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು.
ಆರೋಪಿಯನ್ನು ಪೊಲೀಸರು ಬಂಧಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ, ಅಪರಾಧಿಗೆ 366ಎ ಕಲಂ ಅಡಿಯಲ್ಲಿ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಕಲಂ 506ರ ಅಡಿಯಲ್ಲಿ 3 ವರ್ಷ ಜೈಲು ಮತ್ತು 3 ಸಾವಿರ ರೂ. ದಂಡ, ಪೋಕ್ಸೋ ಕಾಯ್ದೆ ಅಡಿ 25 ವರ್ಷ ಜೈಲು ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಸೋಮವಾರ ಆದೇಶಿಸಿದೆ.
2018ರಲ್ಲಿ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಪ್ರಕರಣ ದಾಖಲಿಸಿಕೊಂಡು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 5 ವರ್ಷ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ವಿವಿಧ ಕಲಂಗಳಡಿಯಲ್ಲಿ ಅಪರಾಧಿಗೆ ಜೈಲು ಶಿಕ್ಷೆ ನೀಡಿದೆ.
ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಯತ್ನ:ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲ್ಲಲು ಯತ್ನಿಸಿದ್ದ ಆಂಧ್ರಪ್ರದೇಶದ ಮೂಲದ ಆರೋಪಿಯನ್ನು ಬಂಧಿಸಿರುವ ಘಟನೆ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿತ್ತು. 26 ವರ್ಷದ ಶಿವ ರಾಮಯ್ಯ ಬಂಧಿತ ಆರೋಪಿ. ಈತ ಕಳೆದು ಒಂದು ತಿಂಗಳಿನಿಂದ ಶಿರಸಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಸ್ಥಳದ ಹತ್ತಿರದಲ್ಲೇ ಬಾಲಕಿ ಮೇಲ ಅತ್ಯಾಚಾರವೆಸಗಿ ನಂತರ ವೈರ್ನಿಂದ ಆಕೆಯ ಕುತ್ತಿಗೆ ಬಿಗಿದು ಕೊಲ್ಲಲು ಯತ್ನಿಸಿದ್ದನು.
ಬಾಲಕಿ ಜೋರಾಗಿ ಅತ್ತಿದ್ದು, ಅಳು ಕೇಳಿದ ಸಾರ್ವಜನಿಕರು ಬಂದು ಗಮನಿಸಿದಾಗ ವಿಷಯ ಗೊತ್ತಾಗಿತ್ತು. ಜನರು ಬರುತ್ತಿದ್ದಂತೆ ಶಿವರಾಮಯ್ಯ ಅಲ್ಲಿಂದ ಪರಾರಿಯಾಗಿದ್ದ. ಆರೋಪಿಯನ್ನು ಸಾರ್ವನಿಕರ ಸಹಾಯದಿಂದ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ತನಿಖಾಧಿಕಾರಿ ಸಿಪಿಐ ರಾಮಚಂದ್ರ ತನಿಖೆ ನಡೆಸಿ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಇದನ್ನೂ ಓದಿ:Kidnap and Rape: ತಿರುವನಂತಪುರದಲ್ಲಿ ಯುವತಿಯನ್ನು ಅಪಹರಿಸಿ ಅತ್ಯಾಚಾರ.. ಆರೋಪಿಯ ಬಂಧನ