ಗದಗ:ಕೋವಿಡ್ ಎರಡನೇ ಅಲೆಯ ಹಾವಳಿಯ ಮಧ್ಯೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಪೇಠಾ ಆಲೂರು ಗ್ರಾಮದಲ್ಲಿ ಪ್ರತಿ ಮನೆಗೂ ಜ್ವರ ಪೀಡಿತ ರೋಗಿಗಳು ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಗ್ರಾಮದಲ್ಲಿ ಕೊರೊನಾ ಆತಂಕ ಮನೆ ಮಾಡಿದ್ದು, ಇಡೀ ಊರಿಗೆ ಊರೇ ರೋಗಗ್ರಸ್ಥವಾಗಿದೆ.
ಆತಂಕದಲ್ಲಿ ಪೇಠಾಆಲೂರು ಗ್ರಾಮಸ್ಥರು ಓದಿ: ವ್ಯಾಕ್ಸಿನ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ, ಲಸಿಕೆಗಾಗಿ ಗುಂಪು ಸೇರಿಕೊಂಡು ನಿಲ್ಲಬೇಡಿ: ಬೊಮ್ಮಾಯಿ
ಗ್ರಾಮದ ಪ್ರತಿಯೊಂದು ಮನೆಯಲ್ಲಿ ಕನಿಷ್ಠ ಒಬ್ಬರು ಅಥವಾ ಇಬ್ಬರು ಜ್ವರದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಗ್ರಾಮದ 900 ಜನಸಂಖ್ಯೆ ಪೈಕಿ ಸದ್ಯ ಇಲ್ಲಿ 700ಕ್ಕೂ ಹೆಚ್ಚು ಜನರಲ್ಲಿ ಈ ನಿಗೂಢ ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಿಂದ ಗ್ರಾಮದಲ್ಲಿ ಆತಂಕದ ಛಾಯೆ ಮೂಡಿದೆ.
ಈಗಾಗಲೇ ಈ ನಿಗೂಢ ಜ್ವರಕ್ಕೆ ಮೂರು ದಿನಗಳ ಅಂತರದಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಕೊರೊನಾ ಲಾಕ್ಡೌನ್ನಿಂದಾಗಿ ಬೆಂಗಳೂರಿನಿಂದ ಗ್ರಾಮಕ್ಕೆ ಹಲವು ಕಾರ್ಮಿಕರು ಆಗಮಿಸಿದ್ದರು. ಹೀಗಾಗಿ ಇವರಿಂದಲೇ ಇಡೀ ಗ್ರಾಮದ ಸುತ್ತ ಜ್ವರ ಹರಡಿಕೊಂಡಿರಬಹುದು ಎಂದು ಜನರು ಹೇಳುತ್ತಿದ್ದಾರೆ.
ಲಾಕ್ಡೌನ್ ಹಾಗೂ ಜನತಾ ಕರ್ಫ್ಯೂ ಇದ್ದ ಕಾರಣ ಇಲ್ಲಿಯ ಗ್ರಾಮಸ್ಥರು ಆಸ್ಪತ್ರೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ ದಿನದಿಂದ ದಿನಕ್ಕೆ ಮಾತ್ರ ಇಡೀ ಗ್ರಾಮ ಜ್ವರದಿಂದ ಆವರಿಸುತ್ತಿದೆ. ಉಳಿದಂತೆ ದಿನಕ್ಕೆ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಈ ಗ್ರಾಮದ ಜನರು ಕೈ ಮುಗಿದು ವೈದ್ಯರಿಗೆ ಮನವಿ ಮಾಡುತ್ತಿದ್ದಾರೆ. ಕೂಡಲೇ ಬಂದು ಇಡೀ ಗ್ರಾಮವನ್ನೇ ಚೆಕ್ ಮಾಡಿ, ಚಿಕಿತ್ಸೆ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು.