ಗದಗ: ಜಿಲ್ಲೆಯಲ್ಲಿ ಅತೀ ಹೆಚ್ಚು ಹೂ ಬೆಳೆಗಾರರು ಇದ್ದಾರೆ. ಹೊರ ರಾಜ್ಯಗಳಿಗೆ ಇಲ್ಲಿಂದ ಹೂ ಸರಬರಾಜು ಆಗುತ್ತೆ. ಆದರೆ ಈಗ ನಿರಂತರವಾಗಿ ಸುರಿದ ಮಳೆಯಿಂದಾಗಿ ಹೂವು ಬೆಳೆದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ ಅತೀ ಹೆಚ್ಚು ಹೂ ಬೆಳೆಯುವ ಹೆಗ್ಗಳಿಕೆಗೆ ಪಾತ್ರವಾಗಿರುವ ಲಕ್ಕುಂಡಿ ಗ್ರಾಮದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಕುಂಡಿ ಗ್ರಾಮದ ಸುಮಾರು 90% ರೈತರು ಹೂವಿನ ಬೆಳೆ ನೆಚ್ಚಿಕೊಂಡಿದ್ದರು. ಆದರೆ ಈ ಬಾರಿ ಸುರಿದ ಮಳೆಯಿಂದಾಗಿ ಹೂ ಬೆಳೆ ಸಂಪೂರ್ಣವಾಗಿ ರೋಗಕ್ಕೆ ತುತ್ತಾಗಿ ಹೂ ಉದುರಿ ಬೀಳುತ್ತಿದೆ. ಇದರಿಂದ ಸಾಲ ಮಾಡಿ ಬೆಳೆದ ಹೂವಿಗೆ ಲಾಭ ಸಿಗದೆ ರೈತ ಸಂಕಷ್ಟಕ್ಕೆ ಈಡಾಗಿದ್ದಾನೆ.
ಸೇವಂತಿ ಹೂ ಹೆಚ್ಚಾಗಿ ಬೆಳೆದಿದ್ದಾರೆ. ಅದರ ಜೊತೆಗೆ ಮಲ್ಲಿಗೆ, ದುಂಡು ಮಲ್ಲಿಗೆ, ಜಾಜಿ ಮಲ್ಲಿಗೆ, ರಾಜಾ ಹೂ, ಕರ್ನೂಲು, ಮತ್ತೂರು ಸೇವಂತಿಗೆ, ಅಬಾಲಿ, ಪೂರ್ಣಿಮಾ, ಹಳದಿ ಪೂರ್ಣಿಮಾ, ಬಿಳಿ ಪೂರ್ಣಿಮಾ ಹೀಗೆ ವಿವಿಧ ರೀತಿಯ ಹೂವು ಬೆಳೆದಿದ್ದರು. ಆದರೆ ರೋಗ ತಗುಲಿರುವುದರಿಂದ ಕೂಲಿಗೂ ಸಾಕಾಗುವಷ್ಟು ಅದಾಯ ಬರಲಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಈ ಗ್ರಾಮದಿಂದ ಹುಬ್ಬಳ್ಳಿ, ಬೆಂಗಳೂರು, ಮುಂಬೈಗೂ ಸಹ ಹೂ ಸರಬರಾಜು ಆಗುತಿತ್ತು. ಆದರೆ ಈ ಬಾರಿಯ ಮಳೆಯಿಂದಾಗಿ ಯಾವ ಖರೀದಿದಾರರು ಸಹ ಗ್ರಾಮದತ್ತ ಸುಳಿದಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಹೂ ಬೆಳೆಗಾರರ ನೆರವಿಗೆ ಬರಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ಲಕ್ಕುಂಡಿ ಗ್ರಾಮದ ರೈತರು ಹೂ ಬೆಳೆಯಲ್ಲಿ ಅಧಿಕ ಲಾಭ ಗಳಿಸುತ್ತಿದ್ದರು. ಒಂದು ಎಕರೆ ಜಮೀನು ಇದ್ದರೆ ಅವರಿಗೆ ಅದೇ ಸರ್ಕಾರಿ ನೌಕರಿ ಇದ್ದಂತೆ. ಆದರೆ ಈಗ ನಿರಂತರ ಮಳೆ ಗ್ರಾಮದ ಜನರನ್ನು ಸಂಷ್ಟಕ್ಕೆ ದೂಡಿದೆ.