ಗದಗ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸೋಮವಾರ ಸಂಜೆ ನಡೆದ ಯುವ ಸಂವಾದದಲ್ಲಿ ಮಾತನಾಡಿದ ಅವರು ಇಷ್ಟೊಂದು ಬಿಸಿಲು ಇದ್ದರೂ ಸಹ ನೀವು ಬಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೀರಿ. ಹಾಗಾಗಿ ನಿಮಗೆ ಧನ್ಯವಾದಗಳು ಎನ್ನುವ ಮೂಲಕ ರಾಗಾ ತಮ್ಮ ಮಾತು ಆರಂಭಿಸಿದರು.
ನಿರುದ್ಯೋಗ ದೊಡ್ಡ ಸಮಸ್ಯೆ: ಭಾರತ್ ಜೋಡೋ ಕಾರ್ಯಕ್ರಮದಲ್ಲಿ ನಾವು ನಡೆದುಕೊಂಡು ಹೋಗುವಾಗ ಬಿಸಿಲು, ಮಳೆ, ಚಳಿ ಇದ್ದರೂ ನಿಮ್ಮ ಶಕ್ತಿ ನಮಗೆ ಪ್ರೋತ್ಸಾಹ ನೀಡಿತ್ತು. ಸಾವಿರಾರು ಯುವಕರ ಜೊತೆಗೆ ನಡೆದುಕೊಂಡು ಹೋದೆ. ಅವರ ಜತೆ ಮಾತನಾಡಿದೆ. ಅವರಿಗೆ ಪ್ರಶ್ನೆ ಮಾಡಿದೆ. ನಿಮಗೆ ಮುಂದಿನ ಸವಾಲು ಏನು? ಅಂತಾ ಕೇಳಿದೆ. ಅದರಲ್ಲಿ ಬಹುತೇಕರು ನಿರುದ್ಯೋಗದ ಬಗ್ಗೆ ಮಾತನಾಡಿದರು. ಇಂದು ನಿರುದ್ಯೋಗ ದೊಡ್ಡ ಸಮಸ್ಯೆಯಾಗಿದೆ. ಇಂಜಿನಿಯರ್, ಎಂಬಿಬಿಎಸ್ ಡಿಗ್ರಿ ಹೀಗೆ ಹಲವಾರು ಪದವಿ ಪಡೆದು ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದಾರೆ. ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಡಿಗ್ರಿ ಪಡೆದವರು ಕೆಲಸ ಇಲ್ಲದೇ ಅಲೆದಾಡುತ್ತಿದ್ದಾರೆ ಎಂದರು.
ಪ್ರಧಾನಿಯವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿನಿ ಎಂದರು. ಆದರೆ, ಈಗ ಸರ್ಕಾರದಿಂದ ಯಾವುದೇ ತರ ಉತ್ತರ ಇಲ್ಲ. ನಿಮ್ಮ ಶರ್ಟ್, ಚಪ್ಪಲಿ ಹೀಗೆ ಹಲವಾರು ವಸ್ತುಗಳ ಮೇಲೆ ಮೇಡ್ ಇನ್ ಚೀನಾ ಇರುತ್ತದೆ. ನನ್ನ ಪ್ರಶ್ನೆ ಮೇಡ್ ಇನ್ ಚೀನಾ ಇದೆ, ಆದ್ರೆ ಮೇಡ್ ಇನ್ ಇಂಡಿಯಾ ಯಾಕೆ ಇಲ್ಲ?. ಕೇವಲ ಮೂರ್ನಾಲ್ಕು ಜನರಿಗೆ ಮಾತ್ರ ಈ ದೇಶವನ್ನು ಕೊಟ್ಟಿದ್ದಾರೆ. ಹೀಗಾಗಿ ಇದೆಲ್ಲ ಆಗ್ತಿಲ್ಲ. ಎಲ್ಲಾ ಸೆಕ್ಟರ್ನಲ್ಲಿ ಈ ಮೂರ್ನಾಲ್ಕು ಜನರ ಏರ್ಪೋರ್ಟ್, ಇಂಡಸ್ಟ್ರೀಸ್ ಇದೆ. ಎಲ್ಲಾ ಕಡೆ ಈ ಮೂರ್ನಾಲ್ಕು ಜನ ಇರುತ್ತಾರೆ. ಇಡೀ ಚೈನಾದ ಮಾಲ್ ತಗೊಂಡು ಬಂದು ನಮ್ಮ ದೇಶದಲ್ಲಿ ಮಾರಾಟ ಮಾಡುತ್ತಿದ್ದಾರೆ. ನಾನು ಆಲೋಚನೆ ಮಾಡ್ತೇನೆ. ಮುಂದೊಂದು ದಿನ ಮೇಡ್ ಇನ್ ಚೀನಾ ಬದಲು ಮೇಡ್ ಇನ್ ಇಂಡಿಯಾ ಅಂತಾ ಆಗಬೇಕು ಎಂದರು.
ಸರ್ಕಾರ ಜಿಎಸ್ಟಿ, ಡಿಮಾನಿಟೈಸೇಷನ್ನಿಂದ ಸಣ್ಣ ಉದ್ಯೋಗ ಮುಚ್ಚಿ ಹಾಕಿದರು. ಗೌತಮ್ ಆದಾನಿ ಅಂತವರಿಗೆ ಯಾವುದೇ ಬ್ಯಾಂಕ್ನಲ್ಲಿ ಲೋನ್ ಸಿಗುತ್ತದೆ. ಆದರೆ ನೀವು ಹೋದರೆ ಲೋನ್ ಸಿಗಲ್ಲ. ನಿಮ್ಮದು ಗೌತಮ್ ಅದಾನಿ ಹೆಸರಲ್ಲ, ನರೇಂದ್ರ ಮೋದಿ ಜತೆಗೆ ನಿಮ್ಮ ಸಂಬಂಧ ಇಲ್ಲ. ಹೀಗಾಗಿ ನಿಮಗೆ ಲೋನ್ ಸಿಗಲ್ಲ. ಇದೇ ಬಿಜೆಪಿ ಮತ್ತು ಕಾಂಗ್ರೆಸ್ನಲ್ಲಿರುವ ವ್ಯತ್ಯಾಸ. ನಾವು ಸಣ್ಣ ಸಣ್ಣ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತೇವೆ. ಸದ್ಯ ಇರುವ ಬೆಲೆ ಮತ್ತು ಕಾಂಗ್ರೆಸ್ ಇದ್ದಾಗ ಬೆಲೆ ಎಷ್ಟಿದೆ ಎಂಬುದನ್ನ ಗಮನಿಸಿ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಜಾಸ್ತಿಯಾಗಿದೆ. ಈ ಎಲ್ಲ ದುಡ್ಡು ಎಲ್ಲಿ ಹೋಗ್ತಿದೆ. ಕೊನೆಗೆ ನಿಮ್ಮ ಜೇಬಿಗಾದರೂ ಬರಬೇಕಲ್ವಾ? ಎಂದು ಕುಟುಕಿದರು.